ಅತಿಥಿ ಶಿಕ್ಷಕರು ಅತಂತ್ರ೪ ತಿಂಗಳಿಗೊಮ್ಮೆ ವೇತನ ,ಕೃಪಾಂಕ,ಉದ್ಯೋಗ ಭದ್ರತೆಯೂ ಇಲ್ಲ

(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಫೆ.೨೪:ರಾಜ್ಯಾದ್ಯಂತ ೪೩ ಸಾವಿರ ಹಾಗೂ ರಾಯಚೂರು ಜಿಲ್ಲೆಯಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ೪ ಸಾವಿರಕ್ಕೂ ಅಧಿಕ ಅತಿಥಿ ಶಿಕ್ಷಕರಿಗೆ ೪ ತಿಂಗಳಿಗೊಮ್ಮೆ ವೇತನ ನೀಡುತ್ತಿರುವ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಗೊಂಡಿದೆ.
ಅತಿಥಿ ಶಿಕ್ಷಕರಿಗೆ ಖಾಯಂ ಶಿಕ್ಷಕರಿಗೆ ದೊರೆಯುವ ಅರ್ಧಕ್ಕೂ ಕಡಿಮೆ ವೇತನ ದೊರೆಯುತ್ತಿದೆ. ಈ ವೇತನವನ್ನು ಸರ್ಕಾರ ಸಹ ೪ ತಿಂಗಳಿಗೊಮ್ಮೆ ಸರ್ಕಾರ ನೀಡುತ್ತಿದ್ದು, ಅತಿಥಿ ಶಿಕ್ಷಕರು ಜೀವನ ನಿರ್ವಹಣೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಿಕ್ಷಕರ ಮನಃಸ್ಥಿತಿ ಚೆನ್ನಾಗಿದ್ದರಷ್ಟೇ ಬೋಧನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯ ಎನ್ನುವುದನ್ನು ರಾಜ್ಯ ಶಿಕ್ಷಣ ಇಲಾಖೆ ಅರ್ಥ ಮಾಡಿಕೊಳ್ಳಬೇಕಿದೆ.ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕರಿಗೆ ೧೦ ಸಾವಿರ ಹಾಗೂ ಪ್ರೌಢಶಾಲೆಯ ಅತಿಥಿ ಶಿಕ್ಷಕರಿಗೆ ೧೦,೫೦೦ ರೂ. ವೇತನ ಮಾತ್ರ ದೊರೆಯುತ್ತಿದೆ. ಆದರೆ,ಈ ವೇತನ ಪ್ರತಿ ತಿಂಗಳು ದೊರೆಯದೆ ೪ ತಿಂಗಳಿಗೊಮ್ಮೆ ನೀಡುತ್ತಿರುವುದು ಶಿಕ್ಷಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ರಾಜ್ಯದಾದ್ಯಂತ ಸದ್ಯ ೬೦ ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದ್ದು, ರಾಯಚೂರು ಜಿಲ್ಲೆಯಲ್ಲಿ ಅಂದಾಜು ೪ ಸಾವಿರಕ್ಕೂ ಅಧಿಕ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ ಖಾಲಿ ಇದೆ. ಉಳಿದಂತೆ ಪ್ರೌಢಶಾಲೆಯಲ್ಲಿ ೬೯೨ ಶಿಕ್ಷಕರ ಹುದ್ದೆ ಖಾಲಿ ಇವೆ. ಆದರೆ, ಈ ಶಿಕ್ಷಕರ ಹುದ್ದೆಯನ್ನು ಸರ್ಕಾರ ಅತಿಥಿ ಶಿಕ್ಷಕರ ಮೂಲಕ ತುಂಬಬಹುದಾಗಿದೆ.
ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ೪ ತಿಂಗಳಿಗೊಮ್ಮೆ ಸಂಬಳ, ಉದ್ಯೋಗ ಭದ್ರತೆ ಕೊರತೆ, ಮೆರಿಟ್ ಪದ್ಧತಿಯಲ್ಲಿ ಶಿಕ್ಷಕರ ಹುದ್ದೆ ಭರ್ತಿಗೆ ಆದೇಶಿಸಿರುವ ಸರ್ಕಾರದ ಕ್ರಮಗಳು ಅತಿಥಿ ಶಿಕ್ಷಕರನ್ನು ಆತಂಕಕ್ಕೀಡು ಮಾಡುವಂತೆ ಮಾಡಿವೆ.
ಕೊರೊನಾ ನಂತರ ಆಯ್ಕೆಯ ಮಿತಿಯ ವಯಸ್ಸನ್ನು ೪೨ ಹಾಗೂ ಪರಿಶಿಷ್ಟರಿಗೆ ೪೫ ವರ್ಷಕ್ಕೆ ಮಿತಿಗೊಳಿಸಲಾಗಿದೆ. ಆದರೆ, ಅತಿಥಿ ಶಿಕ್ಷಕರು ಪಡುತ್ತಿರುವ ಸಂಕಷ್ಟವನ್ನು ನೋಡುತ್ತಿರುವ ಶಿಕ್ಷಕರು ಶಿಕ್ಷಕರ ಹುದ್ದೆಗೆ ಅರ್ಜಿ ಹಾಕುವುದಕ್ಕೆ ಹಿಂದೇಟು ಹಾಕುವಂತಾಗಿದೆ.
ರಾಜ್ಯ ಸೇರಿದಂತೆ ಜಿಲ್ಲೆಯಾದ್ಯಂತ ೨೦೧೨ರಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆರಂಭದಲ್ಲಿ ಪ್ರಾಥಮಿಕ ಶಿಕ್ಷಕರಿಗೆ ೫ ಸಾವಿರ ಹಾಗೂ ಪ್ರೌಢಶಾಲೆ ಅತಿಥಿ ಶಿಕ್ಷಕರಿಗೆ ೬ ಸಾವಿರ ವೇತನವನ್ನು ನಿಗದಿಪಡಿಸಲಾಗಿತ್ತು. ನಂತರ ೨೦೧೬ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ೭,೫೦೦ ಹಾಗೂ ಪ್ರೌಢಶಾಲೆ ಶಿಕ್ಷಕರಿಗೆ ೮ ಸಾವಿರ ನಿಗದಿಪಡಿಸಲಾಗಿತ್ತು.
೨೦೨೨ರಲ್ಲಿ ಪ್ರಾಥಮಿಕ ಶಾಲೆ ಅತಿಥಿ ಶಿಕ್ಷಕರಿಗೆ ೧೦ ಸಾವಿರ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ೧೦,೫೦೦ ರೂ. ವೇತನ ನಿಗದಿಪಡಿಸಲಾಗಿದ್ದು, ಇಂದಿಗೂ ಅದೇ ವೇತನ ಮುಂದುವರೆಸಲಾಗಿದೆ. ಬಜೆಟ್‌ನಲ್ಲಿ ವೇತನ ಹೆಚ್ಚಳವಾಗಬಹುದೆನ್ನುವ ಶಿಕ್ಷಕರ ನಿರೀಕ್ಷೆ ಹುಸಿಯಾಗಿದೆ.
ಸರ್ಕಾರ ಶಿಕ್ಷಕರನ್ನು ನೇಮಕ ಮಾಡಿ ತನ್ನ ಜವಾಬ್ದಾರಿಯನ್ನು ಮುಗಿಸುತ್ತಿದೆ. ಶಾಲೆ ಹಾಗೂ ಅತಿಥಿ ಶಿಕ್ಷಕರಿಗೆ ಇರುವ ಸಮಸ್ಯೆಗಳತ್ತ ಗಮನಹರಿಸಿದಾಗ ಮಾತ್ರ ಗುಣಮಟ್ಟದ ಬೋಧನೆಯನ್ನು ಶಿಕ್ಷಕರು ನೀಡಲು ಸಾಧ್ಯವಾಗಲಿದೆ.
ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಅತಿಥಿ ಶಿಕ್ಷಕರು ಈಗಾಗಲೇ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಎರಡು ಬಾರಿ ಬೃಹತ್ ಪ್ರತಿಭಟನೆ ಸಂಘಟಿಸಿ ಸರ್ಕಾರಕ್ಕೆ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಟ್ಟಿದ್ದರೂ ಸರ್ಕಾರ ಮಾತ್ರ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುತ್ತಿಲ್ಲ ಎಂದು ಜಿಲ್ಲೆಯ ಅತಿಥಿ ಶಿಕ್ಷಕರು ಆರೋಪಿಸಿದ್ದಾರೆ.
ಈ ಅತಿಥಿ ಶಿಕ್ಷಕರು ಬೋಧನೆ ಸೇರಿದಂತೆ ಬಿಸಿಯೂಟ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೂ ಸೇರಿದಂತೆ ಇನ್ನಿತರ ಕೆಲಸಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಖಾಯಂ ಶಿಕ್ಷಕರು ಮಾಡುವ ಎಲ್ಲ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಆದರೆ, ಖಾಯಂ ಶಿಕ್ಷಕರಿಗೆ ದೊರಕುವ ವೇತನದ ಅರ್ಧದಷ್ಟು ವೇತನ ಸಹ ದೊರೆಯದಿರುವುದು ಅತಿಥಿ ಶಿಕ್ಷಕರಿಗೆ ತೀವ್ರ ಅಸಮಾಧಾನ ಉಂಟು ಮಾಡಿದೆ.
ಮೆರಿಟ್ ಆಧಾರದ ಮೇಲೆ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿರುವುದು ಅತಿಥಿ ಶಿಕ್ಷಕರ ಬದುಕು ಅತಂತ್ರ ಪರಿಸ್ಥಿತಿಗೆ ಸಿಲುಕಿದೆ. ಏಕೆಂದರೆ ವಾರ್ಷಿಕ ಅತಿಥಿ ಶಿಕ್ಷಕರಿಗೆ ಕೃಪಾಂಕ ದೊರೆಯುತ್ತಿಲ್ಲ. ಹೊಸದಾಗಿ ನೇಮಕಗೊಳ್ಳುವ ಶಿಕ್ಷಕರಿಗೆ ಉತ್ತಮ ಅಂಕಗಳಿದ್ದಲ್ಲಿ ಒಂದು ವೇಳೆ ಅವರು ನೇಮಕಾತಿಯಾದಲ್ಲಿ ಅತಿಥಿ ಶಿಕ್ಷಕರು ಹುದ್ದೆಯಿಂದ ಹೊರ ಹೋಗಬೇಕಾಗುತ್ತದೆ.
ಶಙ. ೫ರಷ್ಟು ಕೃಪಾಂಕ ನೀಡಿ ನೇಮಕಾತಿಯಲ್ಲಿ ಅತಿಥಿ ಶಿಕ್ಷಕರನ್ನೇ ಪರಿಗಣಿಸಬೇಕೆನ್ನುವ ಶಿಕ್ಷಕರ ಮನವಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ.
ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಸಂಕಷ್ಟದಲ್ಲಿರುವ ಅತಿಥಿ ಶಿಕ್ಷಕರು ಶಿಕ್ಷಕರ ನೇಮಕಾತಿಯನ್ನು ಕೈಬಿಡಿ, ಶೇ.೫ ವಾರ್ಷಿಕ ಕೃಪಾಂಕ ನೀಡಿ ಅತಿಥಿ ಶಿಕ್ಷಕರನ್ನೇ ಖಾಯಂ ಆಗಿ ನೇಮಕ ಮಾಡಿಕೊಳ್ಳಿ. ಉದ್ಯೋಗ ಭದ್ರತೆಯನ್ನು ಒದಗಿಸಿ ಎಂದು ಸರ್ಕಾರಕ್ಕೆ ಈಗಾಗಲೇಮಾಡಿರುವ ಮನವಿಗೆ ಸೂಕ್ತವಾಗಿ ಸ್ಪಂದಿಸಬೇಕಿದೆ. ಈ ನಿಟ್ಟಿನಲ್ಲಿ ಹಿಂದುಳಿದ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಶಿಕ್ಷಣ ಇಲಾಖೆ ಗಮನ ಹರಿಸಬೇಕೆನ್ನುವುದು ಜಿಲ್ಲೆಯ ಜನತೆಯ ಅಭಿಪ್ರಾಯ.

ಬಾಕ್ಸ್

  • ಅತಿಥಿ ಶಿಕ್ಷಕರಿಗೆ ಮಾಸಿಕ ೧೦, ೧೦,೫೦೦ ಸಂಬಳ
  • ೪ ತಿಂಗಳಿಗೊಮ್ಮೆ ಸಂಬಳ
  • ಜಿಲ್ಲೆಯಾದ್ಯಂತ ಪ್ರಾ.ಶಾಲಾ ಅತಿಥಿ ಶಿಕ್ಷಕರು
  • ೬೯೧ ಪ್ರೌಢಶಾಲಾ ಶಿಕ್ಷಕರಿಂದ ಕರ್ತವ್ಯ
  • ಖಾಯಂ ಶಿಕ್ಷಕರಿಗೆ ಕೆಲಸ ನಿರ್ವಹಣೆ
  • ಶೇ. ೫ ವಾರ್ಷಿಕ ಕೃಪಾಂಕಕ್ಕೆ ಮನವಿ
  • ಖಾಯಂ ನೇಮಕಾತಿ ಕೈ ಬಿಡಲು ಒತ್ತಾಯ

ಬಾಕ್ಸ್ ೧
೨೦೧೨ ರಿಂದ ಅತಿಥಿ ಶಿಕ್ಷಕರ ನೇಮಕಾತಿ ವ್ಯವಸ್ಥೆಯನ್ನು ಸರ್ಕಾರ ಜಾರಿ ಮಾಡಿದೆ. ಎರಡು ಬಾರಿ ವೇತನ ಪರಿಷ್ಕರಣೆ ಮಾಡಿದರೂ ಖಾಯಂ ಶಿಕ್ಷಕರ ವೇತನದ ಅರ್ಧದಷ್ಟು ನಮಗೆ ಸಿಗುತ್ತಿಲ್ಲ. ಸಿಗುವ ವೇತನವೂ ಮಾಸಿಕ ದೊರೆಯದೆ ೪ ತಿಂಗಳಿಗೊಮ್ಮೆ ದೊರೆಯುತ್ತಿದೆ. ಈ ವೇತನವನ್ನೇ ಜೀವನಕ್ಕೆ ಅವಲಂಬಿಸಿರುವ ಶಿಕ್ಷಕರ ಬದುಕು ಅತಂತ್ರದಲ್ಲಿವೆ. ಶಿಕ್ಷಕ ಚೆಂದ ಇದ್ದರೆ ಶಿಕ್ಷಣ ಚೆಂದಾ ಎನ್ನುವ ಮನಃಸ್ಥಿತಿಯನ್ನು ಶಿಕ್ಷಣ ಇಲಾಖೆ ಕಂಡುಕೊಳ್ಳಬೇಕಿದೆ. ಈಗಾಗಲೇ ಶಿಕ್ಷಕರಾಗಿ ಹಲವು ವರ್ಷ ಸೇವೆ ಸಲ್ಲಿಸಿರುವ ಅತಿಥಿ ಶಿಕ್ಷಕರನ್ನೇ ಖಾಯಂಗೊಳಿಸುವ ಮೂಲಕ ಶಿಕ್ಷಕರ ಬದುಕು ಹಾಗೂ ಜಿಲ್ಲೆಯ ಶಿಕ್ಷಣಗುಣಮಟ್ಟ ಸುಧಾರಣೆಗೆ ಕ್ರಮಕೈಗೊಳ್ಳಬೇಕಿದೆ.
-ದುರ್ಗಪ್ಪ ಅಮರಾವತಿ
ಪ್ರೌಢಶಾಲಾ ಅತಿಥಿ ಶಿಕ್ಷಕ