ಅತಿಥಿ ಉಪನ್ಯಾಸಕರ ಸೇವೆ ಖಾಯಂಗೊಳಿಸಲು ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ

ಲಿಂಗಸೂಗೂರು.ಡಿ.೦೬- ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುವ ಉಪನ್ಯಾಸಕರ ಸೇವೆ ಖಾಯಂ ಗೊಳಿಸುವತ್ತೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಮಂಗಳವಾರ ಸಹಾಯಕ ಆಯುಕ್ತ ಅವಿನಾಶ್ ಸಿಂಧು ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಸೇವೆ ಖಾಯಂಗೊಳಿಸುವಂತೆ ತರಗತಿ ಬಹಿಷ್ಕರಿಸಿದ್ದಾರೆ. ತರಗತಿ ಬಹಿಷ್ಕಾರದಿಂದಾಗಿ ನಮಗೆ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ನಮ್ಮ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ರೀತಿಯಿಂದ ಶಿಕ್ಷಣದಿಂದ ವಂಚಿತರಾದ ನಾವು ಬಡ ಕುಟುಂಬದಿಂದ ಬಂದಿರುತ್ತೇವೆ. ಸರ್ಕಾರದ ಸೌಲಭ್ಯಗಳನ್ನು ಪಡೆದು ಓದಿನಲ್ಲಿ ಅತ್ಯಾಸಕ್ತಿಯಿಂದ ತರಗತಿಗಳಿಗೆ ಬರುತ್ತಿದ್ದೇವೆ. ಆದರೆ, ಅತಿಥಿ ಉಪನ್ಯಾಸಕರ ಬಗೆಹರಿಯದ ಸಮಸ್ಯೆಯಿಂದ ನಾವು ಪಾಠ ಪ್ರವಚನಗಳಲ್ಲಿ ಹಿಂದುಳಿಯಬೇಕಾಗಿದೆ. ಅತ್ಯಂತ ಹಿಂದುಳಿದ ಈ ಪ್ರದೇಶದ ಶಿಕ್ಷಣ ಮಟ್ಟ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಇಂತಹ ಸಂಕಷ್ಟಗಳು ಎದುರಾದಾಗ ನಮ್ಮ ಕನಸುಗಳಿಗೆ ಪರಿಹಾರವಾದರೂ ಸಿಕ್ಕಿತೇ? ನಮ್ಮ ತಂದೆತಾಯಿಗಳು ಕೂಲಿ ಮಾಡಿ ನಮ್ಮ ಶೈಕ್ಷಣಿಕ ಪ್ರಗತಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಬಡ ವಿದ್ಯಾರ್ಥಿಗಳಾದ ನಾವು ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆದು ಭವಿಷ್ಯದ ಕನಸನ್ನು ಹೊತ್ತು ಬಂದಿದ್ದೇವೆ. ಆದರೆ, ಇಂತಹ ಜ್ವಲಂತ ಸಮಸ್ಯೆಗಳಿಂದ ನಮ್ಮ ಭವಿಷ್ಯಕ್ಕೆ ಕಂಟಕ ಎದುರಾದಂತಾಗಿದೆ. ಸಮಾಜವಾದಿ ಚಿಂತಕರಾದ ತಾವು ಸಾಮಾಜಿಕ ನ್ಯಾಯವನ್ನು ನೀಡುತ್ತಾ, ಕೆಳ ಸಮುದಾಯದ ಹಿಂದುಳಿದವರ ಏಳಿಗೆಗಾಗಿ ಶ್ರಮಿಸುತ್ತಿರುವಿರಿ. ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಶೇಕಡ ೯೦ ರಷ್ಟು ವಿದ್ಯಾರ್ಥಿಗಳು ಹಿಂದುಳಿದ ವರ್ಗ, ಮತ್ತು ದಲಿತ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸಿ, ಅವರಿಗೆ ಕಾಯಮಾತಿ ನೀಡುವುದರ ಮೂಲಕ ನಮ್ಮ ಭವಿಷ್ಯವನ್ನು ಹಸನುಗೊಳಿಸುವಿರೆಂದು ನಂಬಿರುತ್ತೇವೆ. ಪ್ರಸ್ತುತ ಸಂದರ್ಭದಲ್ಲಿ ಇದೀಗ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು, ಪ್ರಾರಂಭದಲ್ಲಿಯೇ ಇಂತಹ ಸಂದಿಗ್ಧ ಸ್ಥಿತಿ ಎದುರುಗೊಂಡಾಗ, ನಮ್ಮ ಓದಾದರೂ ಹೇಗೆ ಮುಂದುವರೆದೀತು ? ಇದನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ನಮ್ಮ ತರಗತಿಗಳಿಗೆ ಯಾವುದೇ ಕುಂದುಂಟಾಗದಂತೆ ಕೂಡಲೇ ತರಗತಿಗಳನ್ನು ನಡೆಸಲು ಆಗಿರುವ ಅನಾನುಕೂಲಗಳನ್ನು ಸರಿಪಡಿಸಿ, ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಸುರೇಶ, ರಮೇಶ, ನಿರುಪಾದಿ, ರಕ್ಷಿತಾ, ಶಿವಲಿಲಾ, ಸಿಂಧು, ಸಚಿನ್, ಸುಜ್ಞಾನ, ಗಣೇಶ, ಅಮರೇಶ ಸೇರಿದಂತೆ ಅತಿಥಿ ಉಪನ್ಯಾಸಕರು ಇದ್ದರು.