ಅತಿಥಿಗೃಹ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಮಹದೇವ್ ಚಾಲನೆ

ಪಿರಿಯಾಪಟ್ಟಣ, ಅ.29: ಮಾಜಿ ಶಾಸಕರ ಅನುದಾನದ ಕಾಮಗಾರಿಗಳಿಗೆ ನಾನು ಚಾಲನೆ ನೀಡುತ್ತಿರುವುದಾಗಿ ಕೆಲ ವಿರೋಧಿಗಳು ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು ಅದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶಾಸಕ ಕೆ.ಮಹದೇವ್ ಸವಾಲು ಹಾಕಿದರು.
ಪಟ್ಟಣದ ಹೊರವಲಯದ ಹಜರತ್ ಬೋಲೆ ಬಾಲೆ ವಾಲಿ ಖಾದ್ರಿ ದರ್ಗಾದಲ್ಲಿ 45 ಲಕ್ಷ ವೆಚ್ಚದ ನೂತನ ಅತಿಥಿಗೃಹ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ನಾನು ಶಾಸಕನಾಗಿ ಆಯ್ಕೆಯಾಗಿ ಎರಡೂವರೆ ವರ್ಷಗಳೇ ಕಳೆದವು ಇಲ್ಲಿಯವರೆಗೂ ಹಿಂದಿನ ಶಾಸಕರ ಅನುದಾನ ಹಾಗೇ ಉಳಿದಿರುತ್ತದೆಯೆ ಎಂದು ಪ್ರಶ್ನಿಸಿ ವಿರೋಧ ಪಕ್ಷದವರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು ಅದಕ್ಕೆ ಸರ್ಕಾರದಿಂದ ಹೆಚ್ಚು ಅನುದಾನ ತಂದು ನೂತನ ಕಾಮಗಾರಿಗಳನ್ನು ಆರಂಭಿಸುವುದರ ಮೂಲಕ ತಕ್ಕ ಉತ್ತರ ನೀಡುತ್ತಿದ್ದೇನೆ, ಸರ್ಕಾರ ಯಾವುದೇ ಇರಲಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ ಎಂದರು.
ಈಗಾಗಲೇ ತಾಲ್ಲೂಕಿನಲ್ಲಿ ಅಲ್ಪಸಂಖ್ಯಾತರು ವಾಸಿಸುವ ಹಳ್ಳಿಗಳಿಗೆ ಕೋಟಿ ಅನುದಾನ ಮಂಜೂರು ಮಾಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಮುಂದಿನ ದಿನಗಳಲ್ಲಿಯೂ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶಾಸಕ ಕುಮಾರ್ ಬಂಗಾರಪ್ಪ ರವರು ಉತ್ತಮ ಕಾರ್ಯಗಳನ್ನು ನಿರ್ವಹಿಸುತ್ತಿರುವುದಾಗಿ ಶ್ಲಾಘಿಸಿ ಹಿಂದೆ ತಾಲ್ಲೂಕಿನ ಅಲ್ಪಸಂಖ್ಯಾತರಿಗೆ ದೊರೆತ ಅನುದಾನಗಳ ಅಂಕಿಅಂಶ ಪಡೆದಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭ ಜಾಮಿಯಾ ಮಸೀದಿ ಗುರುಗಳಾದ ಜಲೀಲ್ ಅಹ್ಮದ್, ಮುಖಂಡರಾದ ಮುಕ್ತಾರ್ ಪಾಷಾ, ರಫೀಕ್, ಅಮ್ಜದ್ ಪಾಷಾ, ಶಫಿ, ಜಾವೀದ್ ಅಹಮದ್ ಮುಶೀರ್ ಖಾನ್, ಅಬ್ದುಲ್ ಅಜೀಜ್, ಅನ್ಸಾರ್, ಮಸೀದಿ ಬೀದಿಯ ಕಲೀಮ್ ಮುಜಾಹೀದ್(ಮುಜ್ಜು ) ರಹೀಮ್ ಖಾನ್ ನಜೀಬ್ ಇಮ್ತಿಯಾಜ್ ಅಹ್ಮದ್ , ಪುರಸಭಾ ಮುಖ್ಯಾಧಿಕಾರಿ ಚಂದ್ರಕುಮಾರ್ ಮತ್ತು ಸದಸ್ಯರು, ಅಲ್ಪಸಂಖ್ಯಾತ ಮುಖಂಡರು ಹಾಜರಿದ್ದರು.