ಅತಿಕ್ರಮಣವಾದ ರುದ್ರಭೂಮಿ ತೆರವಿಗೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ

ಔರಾದ್ : ಫೆ.24:ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಅಮರೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಹಿಂದೂಗಳ ರುದ್ರಭೂಮಿ ಸ್ಥಳವನ್ನು ಅರ್ಧಕ್ಕೂ ಹೆಚ್ಚು ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದು, ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದರು.

ರುದ್ರಭೂಮಿ ಬಳಿಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಪಾದಯಾತ್ರೆಯ ಮೂಲಕ ತಹಸೀಲ್ ಕಚೇರಿಗೆ ತೆರಳಿದರು. ರಸ್ತೆಯೂದ್ದಕ್ಕೂ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಮಾತನಾಡಿದ ಕಾರ್ಯಕರ್ತರು, ಅಮರೇಶ್ವರ ದೇವಸ್ಥಾನದ ಬಳಿಯಲ್ಲಿ ರುದ್ರಭೂಮಿಗೆ 2 ಎಕರೆ 6 ಗುಂಟೆ ನಿವೇಶನವಿದೆ. ಆದರೆ ಈ ಪೈಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ 16 ಗುಂಟೆ ಜಮೀನು ಕೆಲವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಅಂತ್ಯ ಸಂಸ್ಕಾರ ಮಾಡಲು ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ ಅತಿಕ್ರಮಣ ತೆರವುಗೊಳಿಸಿಲ್ಲ ಎಂದು ದೂರಿದರು. ಕೂಡಲೇ ಅತಿಕ್ರಮಣ ತೆರವು ಮಾಡಬೇಕು. ಸುತ್ತಲು ತಡೆಗೋಡೆ ನಿರ್ಮಾಣ ಮಾಡಬೇಕು, ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಪಟ್ಟಣದಲ್ಲಿ 20-30 ಸಾವಿರ ಜನಸಂಖ್ಯೆಯಿದ್ದು, ಹಿಂದೂ ರುದ್ರಭೂಮಿಗೆ ಹೆಚ್ಚುವರಿಯಾಗಿ ಇನ್ನೂ 10 ಎಕರೆ ಜಮೀನು ನೀಡಬೇಕು ಎಂದು ಆಗ್ರಹಿಸಿದರು. ಈಚೇಗೆ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಡಿಸಿ ಗೋವಿಂದರಡ್ಡಿ ಅವರಿಗೆ ತೆರವು ಮಾಡುವಂತೆ ಮನವಿ ಸಲ್ಲಿಸಿದ್ದೇವೆ. 4 ದಿನಗಳಲ್ಲಿ ತೆರವು ಮಾಡುವದಾಗಿ ಭರವಸೆ ನೀಡಿದರು. ಆದರೆ ಇಲ್ಲಿಯವರೆಗೆ ತೆರವುಗೊಳಿಸಿಲ್ಲ ಎಂದು ದೂರಿದರು.

ನಾಗರಿಕ ಸಂಘರ್ಷ ಸಮಿತಿ ಅಧ್ಯಕ್ಷ ಬಸವರಾಜ ದೇಶಮುಖ, ಲಿಂಗಾಯತ ಸಮಾಜ ಮುಖಂಡರಾದ ರವೀಂದ್ರ ಮೀಸೆ, ಶರಣಪ್ಪ ಪಾಟೀಲ, ಬಂಡೆಪ್ಪ ಕಂಟೆ, ಕರವೇ (ನಾರಾಯಣ ಗೌಡ ಬಣದ) ತಾಲೂಕು ಅಧ್ಯಕ್ಷ ಅನಿಲ ಹೇಡೆ, ಲಿಂಗಾಯತ ಸಮಾಜದ ಅಧ್ಯಕ್ಷ ವಿರೇಶ ಅಲಮಾಜೆ, ರಹೀಂ ಮೌಲಾಸಾಬ, ಮಹೇಶ ಸ್ವಾಮಿ, ವಿರೇಶ ಕನಕೆ, ವಿಶಾಲ ಚಿದ್ರೆ, ಅಮಿತ ಶಿವಪೂಜೆ, ಸಿದ್ದು ಚ್ಯಾರೆ, ಆನಂದ ದ್ಯಾಡೆ, ಬಸವಲಿಂಗ, ಸಚಿನ ಭಂಗೆ, ವಿಜಯಕುಮಾರ ಗಂದಗೆ, ರವಿ ಭಾಲ್ಕೆ, ಅಂಬ್ರೇಶ್ ಪಾಟೀಲ್, ಸಂತೋಷ ದ್ಯಾಡೆ ಸೇರಿದಂತೆ ಅನೇಕರಿದ್ದರು.


ತೆರವು ಕ್ರಮ ಕೈಗೊಳ್ಳುವ ತನಕ ಪ್ರತಿಭಟನೆ ನಿಲ್ಲುವುದಿಲ್ಲ : ದೇಶಮುಖ

ಪಟ್ಟಣದ ಅಮರೇಶ್ವರ ದೇವಸ್ಥಾನದ ಬದಿಯಲ್ಲಿ ಇರುವ ಹಿಂದೂ ರುದ್ರ ಭೂಮಿಯನ್ನು ಅಕ್ರಮಿಸಿಕೊಂಡಿರುವ ವ್ಯಕ್ತಿಗಳನ್ನು ಕಾನೂನುರಿತ್ಯ ಕ್ರಮಕೈಗೊಳ್ಳಬೇಕು, ರುದ್ರಭೂಮಿ ಮಾಪನ ಮಾಡಿ ಅತಿಕ್ರಮಣವಾದ 15 ಗುಂಟೆ ಜಾಗವನ್ನು ತೆರವುಗೊಳಿಸಬೇಕು, ಹಲವಾರು ಬಾರಿ ಹೋರಾಟ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ, ಕೂಡಲೇ ಅತಿಕ್ರಮಣವಾದ ರುದ್ರಭೂಮಿಯ ಜಾಗವನ್ನು ತೆರವು ಗೊಳಿಸಿ, ಎಲ್ಲಿಯ ವರೆಗೆ ತೆರವು ಕಾರ್ಯ ಕೈಗೊಳ್ಳುವದಿಲ್ಲವೊ ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ.

ಬಸವರಾಜ ದೇಶಮುಖ
ನಾಗರಿಕ ಸಂಘರ್ಷ ಸಮಿತಿ ಅಧ್ಯಕ್ಷರು, ಔರಾದ