ಅತಿಕ್ರಮಣದ ಆರೋಪ: ಸಂತ್ರಸ್ತ ಮನೆಗೆ ದಲಿತ್ ಸೇವಾ ಸಮಿತಿ ಭೇಟಿ

ಪುತ್ತೂರು, ಮೇ ೨೭- ಒಳಮೊಗ್ರು ಗ್ರಾಮದ ದರ್ಬೆತಡ್ಕ ರಘುನಾಥ ಮುಗೇರ ಎಂಬವರು ದರ್ಬೆತಡ್ಕ ಶಾಲಾ ಜಾಗವನ್ನು ಅತಿಕ್ರಮಣ ಮಾಡಿದರೆಂದು ವಾಸವಿರುವ ಗುಡಿಸಲನ್ನು ತೆರವುಗೊಳಿಸಲು ದರ್ಬೆತಡ್ಕ ಶಾಲಾ ಅಭಿವೃದ್ಧಿ ಮಂಡಳಿ ಹಾಗೂ ಒಳಮೊಗ್ರು ಗ್ರಾಮ ಪಂಚಾಯತ್ ಒತ್ತಡ ಹಾಕುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿಯ ತಂಡ ಈ ಗುಡಿಸಲಿಗೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿತು.
ಈ ಕುರಿತು ನೊಂದ ಕುಟುಂಬಕ್ಕೆ ಜಿಲ್ಲಾಡಳಿತ ಮೂಲಕ ಕಾನೂನು ಬದ್ಧವಾಗಿ ನ್ಯಾಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ದಲಿತ್ ಸೇವಾ ಸಮಿತಿಯ ಸ್ಥಾಪಕ ಜಿಲ್ಲಾಧ್ಯಕ್ಷ ಬಿ.ಕೆ. ಶೇಷಪ್ಪ ಬೆದ್ರಕಾಡು ಹಾಗೂ ಪುತ್ತೂರು ತಾಲೂಕು ಅಧ್ಯಕ್ಷ ಬಿ.ಕೆ. ಅಣ್ಣಪ್ಪ ಕಾರೆಕಾಡು ಭರವಸೆ ನೀಡಿದರು. ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿಟ್ಲ, ಉಪಾಧ್ಯಕ್ಷ ಮನೋಹರ್ ಕೋಡಿಜಾಲ್, ಕುಂಬ್ರ ಶಾಖೆಯ ಅಧ್ಯಕ್ಷ ಜಯಂತ ಮತ್ತು ಸದಸ್ಯ ನಾರಾಯಣ ತಂಡದಲ್ಲಿದ್ದರು.