ಅತಂತ್ರ ಸ್ಥಿತಿಯಲ್ಲಿ ಆಶ್ರಮ ಶಾಲೆಯ ಮಕ್ಕಳು

ಸಂಜೆವಾಣಿ ವಾರ್ತೆ
ಹನೂರು: ಆ.10:- ಆದಿವಾಸಿ ಬುಡಕಟ್ಟು ಜನಾಂಗದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಿ ಶಿಕ್ಷಣವಂತರು ಸುಸಂಸ್ಕೃತರನ್ನಾಗಿಸಿ ಸಮಾಜದ ಮುಖ್ಯ ವಾಹಿನಿಗೆ ತಂದು ಸ್ವತಂತ್ರ ಬದುಕು ಕಟ್ಟಿಕೊಂಡು ಜೀವನ ದೂಡಲು ಅನುವಾಗುವಂತೆ ಈ ವರ್ಗಕ್ಕೆಂದೇ ಸರ್ಕಾರ ಮಹತ್ವದ ಯೋಜನೆಗಳನ್ನು ರೂಪಿಸಿ ಅದಕ್ಕೆಂದೇ ಪ್ರತ್ಯೇಕ ಇಲಾಖೆಯನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಅನುದಾನವನ್ನು ಮೀಸಲಿರಿಸಿದೆಯಾದರೂ ಅನುಷ್ಟಾನಕ್ಕೆ ತರಬೇಕಾದ ಅಧಿಕಾರಿಗಳ ಅಸಡ್ಡೆ, ಬೇಜವಾಬ್ದಾರಿತನ ಹಾಗೂ ಭ್ರಷ್ಟಾಚಾರದಿಂದಾಗಿ ಸರ್ಕಾರದ ಆಶಯ ಈಡೇರದಿದ್ದರೂ ಸರ್ಕಾರದ ಹಣ ಪೆÇೀಲಾಗುತ್ತಿರುವುದು ಒಂದೆಡೆಯಾದರೆ ಬುಡಕಟ್ಟು ಜನಾಂಗದವರ ಮಕ್ಕಳ ಬದುಕು ಹಸನಾಗದೆ ಮೂರಾಬಟ್ಟೆಯಾಗಿ ಮೂಲೆ ಸೇರಿರುವುದು ಚಾಮರಾಜನಗರ ಜಿಲ್ಲೆಯಾದ್ಯಂತದ ಗಿರಿಜನ ಆಶ್ರಮ ಶಾಲೆಗಳ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಕಂಡು ಬಂದ ಕಟು ವಾಸ್ತವ.
ಇಡೀ ಚಾಮರಾಜನಗರ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರಸ್ಥಾನಕ್ಕೆ ಸೇರಿದ ಕೋಳಿಪಾಳ್ಯ, ರಂಗಸoದ್ರ, ಪುಣಜನೂರು, ಮುರಡಿಪಾಳ್ಯ, ಕೆ.ಗುಡಿ, ಬೇಡಗುಳಿ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ, ಮದ್ದೂರು, ಬರಗಿ ಮತ್ತು ಯಳಂದೂರು ತಾಲ್ಲೂಕಿನ ಪುರಾಣಿಪೆÇೀಡು, ಕೊಳ್ಳೇಗಾಲ ತಾಲ್ಲೂಕಿನ ರಾಚಪ್ಪಾಜಿನಗರ, ಕಂಚಗಳ್ಳಿ, ಹನೂರು ತಾಲ್ಲೂಕಿನ ಮಹಾದೇಶ್ವರಬೆಟ್ಟ, ,ಪೆÇನ್ನಾಚ್ಚಿ, ಕೋಣನಕೆರೆ, ಗಾಣಿಗ ಮಂಗಲ, ಜೀರಿಗೆಗದ್ದೆ, ಹಿರಿಯಂಬಲ, ಬೈಲೂರು, ನಕ್ಕುಂದಿ ಸೇರಿದಂತೆ ಒಟ್ಟು 20 ಗಿರಿಜನ ಆಶ್ರಮ ಶಾಲೆಗಳಿವೆ.
1976 ರಲ್ಲಿ ಈ ಆಶ್ರಮ ಶಾಲೆಗಳನ್ನು ಸ್ಥಾಪಿಸಲಾಗಿದ್ದು ಅಲ್ಲಿಂದ ಇಲ್ಲಿಯ ತನಕ ಈ ಗಿರಿಜನ ಆಶ್ರಮ ಶಾಲೆಗಳಲ್ಲಿ ವ್ಯಾಸಾಂಗ ಮಾಡಿರುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 18 ಸಾವಿರ ಎಂದು ಅಂದಾಜಿಸಲಾಗಿದೆ. ಆದರೆ ಅಂದುಕೊಂಡಂತೆ ಯಾವ ಅಭಿವೃದ್ದಿಯನ್ನು ಸಾಧಿಸದಿರುವುದು ಮಾತ್ರ ನಾಚಿಗೇಡಿನ ಸಂಗತಿ ಎಂದರೂ ತಪ್ಪಾಗಲಾರದು. ಈ ಶಾಲೆಗಳಲ್ಲಿ ಕಲಿತ ಒಬ್ಬನೇ ಒಬ್ಬ ವಿದ್ಯಾರ್ಥಿಯಾದರೂ ಸರ್ಕಾರಿ ಉದ್ಯೋಗಕ್ಕೆ ತೆರಳಿ ಬದುಕು ಕಟ್ಟಿಕೊಂಡಿದ್ದರೆ ಅದು ಅತಿಶಯವೆನ್ನಬಹುದು.
ನೋ..ನೋ.. ಭೂತಕನ್ನಡಿ ಹಾಕಿ ಹುಡುಕಿದರೂ ಒಬ್ಬನೇ ಒಬ್ಬ ಸಿಗುವುದಿಲ್ಲ ಎಂದ ಮೇಲೆ ಯಾವ ಪುರುಷಾರ್ಥಕ್ಕಾಗಿ ಸರ್ಕಾರ ಈ ಯೋಜನೆ ರೂಪಿಸಿ ಅಧಿಕಾರಿ/ನೌಕರ ವರ್ಗದವರಿಗೆ ಲಕ್ಷಾಂತರ ರೂಪಾಯಿ ವ್ಯಯಿಸಿತಾದರೂ ಪ್ರತಿಫಲ ಮಾತ್ರ ಶೂನ್ಯವಾಗಿ ವ್ಯವಸ್ಥೆಯನ್ನು ಅಣಕಿಸುತ್ತಿದೆ. ಈ ಆಶ್ರಮ ಆಶ್ರಮ ಶಾಲೆಗಳಲ್ಲಿ ಕಲಿತ ಬಹುತೇಕ ಮಕ್ಕಳು ಸುಶಿಕ್ಷಿತರಾಗುವುದರ ಬದಲಿಗೆ ಅಪ್ಪ ಅಮ್ಮಂದಿರಿಗೆ ಭಾರವಾಗಿ ಕಿರಿಯ ವಯಸ್ಸಿನಲ್ಲೇ ವಿವಾಹವಾಗಿ ದುಶ್ಚಟಗಳ ದಾಸರಾಗಿ ಅವರ ಪತ್ನಿಯರನ್ನು ವಿಧವೆಯರನ್ನಾಗಿಸಿ ಇಹಲೋಕ ತ್ಯಜಿಸಿರುವ ಬಹುತೇಕ ಪ್ರಕರಣಗಳನ್ನು ಹನೂರು ತಾಲ್ಲೂಕಿನ ಪ್ರತಿ ಸೋಲಿಗರ ಹಾಡಿಗಳಲ್ಲಿ 10-20 ಮಂದಿ ಇಂತಹವರನ್ನು ಕಾಣಬಹುದಾಗಿದೆ. ಇದನ್ನೆಲ್ಲಾ ನೋಡಿದಾಗ ಮುಖ್ಯ ವಾಹಿನಿಗೆ ತರಬೇಕಾದ ಮಕ್ಕಳನ್ನು ಸಮಾಜದಿಂದ ದೂರ ಉಳಿಸಿ ಅಜ್ಞಾತವಾಸಕ್ಕೆ ದೂಡಿರುವುದು ಭ್ರಷ್ಟ ಆಡಳಿತ ವ್ಯವಸ್ಥೆಯ ಪ್ರತೀಕವೆನ್ನಬಹುದು.
ಇನ್ನು ಗಿರಿಜನ ಆಶ್ರಮ ಶಾಲೆಗಳ ಅವ್ಯವಸ್ಥೆಯ ಬಗ್ಗೆ ಪಟ್ಟಿ ಮಾಡುತ್ತಾ ಹೋದರೆ ಅದೇ ದೊಡ್ಡ ರಾಮಾಯಣವಾಗುವುದೇನೋ..ನುರಿತ ಶಿಕ್ಷಕರ ಕೊರತೆ ಹಾಗೂ ಹಾಲಿ ಇರುವ ಶಿಕ್ಷಕರಿಗೆ ವಸತಿ ಸೌಕರ್ಯ ಕಲ್ಲಿಸದಿರುವುದು. ಮತ್ತು ವಿಷಯವಾರು ಶಿಕ್ಷಕರನ್ನು ನೇಮಿಸದಿರುವುದು. ಒಬ್ಬ ಅಥವಾ ಇಬ್ಬರು ಶಿಕ್ಷಕರೇ ಎಲ್ಲಾ ವಿಷಯಗಳ ಪಾಠ ಮಾಡುವುದರಿಂದ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ.
ಮುಖ್ಯವಾಗಿ ಮಕ್ಕಳು ರಾತ್ರಿ ಆಶ್ರಮ ಶಾಲೆಯಲ್ಲಿ ತಂಗುವಂತಾದರೆ ಶಿಸ್ತು ಪಾಲನೆಯಾಗಿ ಅವರ ಮುಂದಿನ ಓದಿಗೆ ಅನುಕೂಲವಾಗುತ್ತದೆ. ಆದರೆ ಬಹುತೇಕ ಕಡೆ ಆ ಕೆಲಸ ಆಗುತ್ತಿಲ್ಲ. ರಾತ್ರಿ ಪಾಳಿಯಲ್ಲಿ ಆಶ್ರಮ ಶಾಲೆಗಳಲ್ಲಿ ಮಕ್ಕಳನ್ನು ನೋಡಿಕೊಳ್ಳಲು ರಾತ್ರಿ ಕಾವಲುಗಾರರನ್ನು ನೇಮಿಸಿಲ್ಲ. ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಹೇಳುವುದಾದರೆ ಬಹುತೇಕ ಸಪೂರ ಸೊಣಕಲು ದೇಹದ ಮಕ್ಕಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ ಅನ್ನುವ ಹಾಗೆ ಸಮರ್ಪಕ ಪೌಷ್ಟಿಕ ಆಹಾರ ನೀಡಿದ್ದರೆ ಅವರೇಕೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದರು.
ಊಟೋಪಚಾರದ ಪಟ್ಟಿಯಂತೆ ಆಹಾರ ನೀಡದೆ ಬೇಕಾಬಿಟ್ಟಿಯಾಗಿ ಕಾಟಾಚಾರಕ್ಕೆ ಯಾವುದೋ ಒಂದಷ್ಟು ಬೇಯಿಸಿ ಹಾಕಿ ಕೈತೊಳೆದುಕೊಳ್ಳುತ್ತಿರುವುದು ಹಾಗೂ ಕಾಲಕಾಲಕ್ಕೆ ಮಕ್ಕಳ ಆರೋಗ್ಯ ತಪಾಷಣೆ ಮಾಡಿಸದಿರುವುದು ಇದಕ್ಕೆ ಸ್ಪಷ್ಟ ಪುರಾವೆಯಾಗಿ ಸದೃಢ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಪಾಠದ ಜತೆಗೆ ಆಟೋಟಗಳನ್ನು ನಡೆಸಿದರೆ ಮಕ್ಕಳ ಆರೋಗ್ಯ ಸುಧಾರಿಸುವುದಾದರೂ ಅದಕ್ಕೂ ಆದ್ಯತೆ ನೀಡುತ್ತಿಲ್ಲ. ದೈಹಿಕ ಶಿಕ್ಷಕರೇ ಇಲ್ಲದಿರುವುದು ಮಕ್ಕಳ ಪ್ರತಿಭೆಗಳನ್ನು ಹೊರತರುವ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡದಿರುವುದು ಕೂಡ ವೈಪಲ್ಯದ ಒಂದು ಭಾಗವಾಗಿದೆ. ಮಕ್ಕಳಿಗೆ ಆರಂಭಿಕ ಹಂತದಲ್ಲೇ ಗುಣಮಟ್ಟದ ಶಿಕ್ಷಣ ಕಲ್ಪಿಸದ ಕಾರಣ 6 ನೇ ತರಗತಿಯ ವ್ಯಾಸಾಂಗಕ್ಕೆ ಬೇರೆ ಶಾಲೆಗೆ ತೆರಳುವ ಸಂದರ್ಭದಲ್ಲಿ ಹೊಂದಿಕ್ಕೊಳ್ಳಲು ಆಗದ ಸಂದಿಗ್ದ ಪರಿಸ್ಥಿತಿಯಲ್ಲಿ ಗೊಂದಲಕ್ಕೀಡಾಗಿ ಕಲಿಕೆ ಕುಂಠಿತಗೊಂಡು7 ಹಾಗೂ8 ನೇ ತರಗತಿಗೆ ಶಾಲೆಯಿಂದ ಹೊರಗುಳಿದಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ.
ಈ ಕೂಡಲೇ ಗಿರಿಜನ ಮಕ್ಕಳ ಆಶ್ರಮ ಶಾಲೆಗಳ ಸುಧಾರಣೆಯಾಗಬೇಕು. ವಿಷಯವಾರು ಶಿಕ್ಷಕರ ನೇಮಕವಾಗಬೇಕು. ಯಾವುದೇ ಆಸ್ಥಿ-ಪಾಸ್ಥಿ ಹೊಂದಿರದ ಆದಿವಾಸಿ ಮಕ್ಕಳಿಗೆ ಶಿಕ್ಷಣವೇ ಆಸ್ತಿಯಾಗಿರುವುದರಿಂದ ಅವರಿಗೆ ಸಮಗ್ರ ಗುಣಮಟ್ಟದ ಹಾಗೂ ವೈಜ್ಞಾನಿಕ ಶಿಕ್ಷಣ ಕಲ್ಪಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರದ ಯೋಜನೆ ಸಫಲಗೊಳ್ಳದೆ ಮಕ್ಕಳ ಬದುಕು ವಿಫಲವಾಗುವುದಾದರೆ ಯಾವ ಪುರುಷಾರ್ಥಕ್ಕಾಗಿ ಈ ಯೋಜನೆ ಎಂದು ಕಿಡಿ ಕಾರಿರುವ ಆದಿವಾಸಿ ಜನಾಂಗದ ಯುವ ಮುಖಂಡ ಹಾಗೂ ಅರಣ್ಯವಾಸಿ ಸೇವಾಟ್ರಸ್ಟ್ನ ಕಾರ್ಯಾಧ್ಯಕ್ಷ ಗಾಣಿಗ ಮಂಗಲದ ನಾಗೇಂದ್ರ, ಈ ಸಂಬಂಧ ಜರೂರು ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಸಚಿವರು ಸೇರಿದಂತೆ ನಾನಾ ಕಡೆಗೆ ದೂರು ಸಲ್ಲಿಸಿದ್ದು, ಆಶ್ರಮ ಶಾಲೆಗಳ ನಿರ್ವಹಣೆಯಲ್ಲಿ ನಡೆದಿರುವ ಗೋಲ್ ಮಾಲ್‍ಗಳ ಬಗ್ಗೆ ತನಿಖೆ ನಡೆದು ವೈಫಲ್ಯಕ್ಕೆ ಕಾರಣರಾದ ತಪ್ಪಿತಸ್ಥರÀ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗೂ ಸುಧಾರಣೆಯಲ್ಲಿ ವಿಳಂಬ ಧೋರಣೆ ಅನುಸರಿಸಿದಲ್ಲಿ ಬುಡಕಟ್ಟು ಜನಾಂಗದ ಯಜಮಾನರುಗಳು ಹಾಗೂ ಯುವ ಸಮೂಹವನ್ನು ಒಗ್ಗೂಡಿಸಿ ಹಂತ ಹಂತವಾಗಿ ಹೋರಾಟವನ್ನು ಹಮ್ಮಿಕ್ಕೊಳ್ಳುವುದಾಗಿ ಎಚ್ಚರಿಸಿದ್ದಾರೆ.