ಶಹಾಪೂರ:ಅ.14:ರಾಜ್ಯದ ಸರಕಾರಿ ಪದವಿ ಕಾಲೇಜುಗಳಲ್ಲಿ ಕಳೆದ 15-20 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಅತಿಥಿ ಉಪನ್ಯಾಸಕರ ಬದುಕು ಸೇವಾ ಭದ್ರತೆಯಿಲ್ಲದೆ ಆತಂತ್ರ ಸ್ಥಿತಿ ಎದುರಿಸುತ್ತಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ತಾಲೂಕ ಅಧ್ಯಕ್ಷ ಅರ್ಜುನ ಕÉ್ಯಕೊಳೂರು ಅವರು ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಸುವಂತೆ ತಾಲೂಕ ತಹಸೀಲ್ದಾರರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು 2023-24ನೇ ಸಾಲಿಗೆ ಕಾಲೇಜು ಇಲಾಖೆಯು ಸರ್ಕಾರಿ ಪದವಿ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಂಡಿರುತ್ತದೆ. ಈ ನೇಮಕ ಆದೇಶದಲ್ಲಿ 10 ತಿಂಗಳ ವೇತನದ ಬದಲಾಗಿ ಸೆಮಿಸ್ಟರ್‍ಗಳ ಕಾರ್ಯಭಾರಕ್ಕೆ ತಕ್ಕಂತೆ ವೇತನವನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ. ಇದು ಅವೈಜ್ಞಾನಿಕ ಆದೇಶವಾಗಿದ್ದು ಇದರಿಂದ ಅತಿಥಿ ಉಪನ್ಯಾಸಕರ ಬದುಕಿನ ನಿರ್ವಹಣೆಗೆ ತುಂಬಾ ಕಷ್ಟವಾಗುತ್ತದೆ. ಮತ್ತು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ 2023-24ನೇ ಸಾಲಿಗೆ ನೇಮಕಗೊಂಡ ಅತಿಥಿ ಉಪನ್ಯಾಸಕರಿಗೆ 10 ತಿಂಗಳ ವೇತನ ನೀಡಬೇಕು ಸೇವಾಭದ್ರತೆಯನ್ನು ಒದಗಿಸಬೇಕೆಂದು ಮನವಿ ಮಾಡಿದರು.
ಗ್ರೇಡ್ 2 ತಹಸೀಲ್ದಾರ ಸೇತು ಮಾದವ ಅವರು ಮನವಿ ಸ್ವಿಕರಿಸಿದರು. ಈ ಸಂದರ್ಭದಲ್ಲಿ ಅತಿಥಿ ಉಪ್ಯಾಸಕರಾದ ಭೀಮರಾಯ ಹೊಸಮನಿ, ಡಾ. ಶಾಂತಪ್ಪ ರಾಠೋಡ, ಡಾ. ಲಕ್ಷ್ಮೀಪುತ್ರ ದೊಡ್ಡಮನಿ, ಡಾ. ದೇವಿಂದ್ರಪ್ಪ, ಗಂಗಪ್ಪ ಹೊಸಮನಿ, ಡಾ. ಸುರೇಶ ಮಾಮಡಿ, ಶ್ರೀದೇವಿ ಪಾಟೀಲ, ಡಾ. ರಮೇಶ ಮಲ್ಲಾಬಾದಿ, ರೇಣುಕಾ ಸ್ವಾಮಿ, ಮಾನಯ್ಯ ಗೌಡಗೇರಾ, ಶರಣಪ್ಪ ಹಾವನೂರ, ನರಸಣ್ಣ ಗುರಿಕಾರ, ಜಗದೀಶ ಪತ್ತಾರ, ಪಂಪಾಪತಿ, ರಾಘವೇಂದ್ರ ಹಾರಣಗೇರಾ, ಇಂದುಕುಮಾರಿ ಮುಂತಾದವರು ಉಪಸ್ಥಿತರಿದ್ದರು.