ಅಣೆಕಟ್ಟು ಸುರಕ್ಷತೆ ಸಂಸ್ಥೆ ಸ್ಥಾಪನೆ

ಬೆಂಗಳೂರು,ನ.೨೫- ರಾಜ್ಯದ ಅಣೆಕಟ್ಟೆಗಳ ಸುರಕ್ಷತೆಗೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರ ಅಣೆಕಟ್ಟೆಗಳ ಸುರಕ್ಷತೆಗೆ ಪ್ರತ್ಯೇಕ ಸಂಸ್ಥೆ ಸ್ಥಾಪಿಸಲು ಮುಂದಾಗಿದ್ದು, ಇಂದು ಸಂಜೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಅಣೆಕಟ್ಟೆ ಸುರಕ್ಷತಾ ಸಂಸ್ಥೆ ಸ್ಥಾಪನೆಗೆ ಒಪ್ಪಿಗೆ ನೀಡುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ಸಂಜೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನ ಕೈಗೊಳ್ಳಲಿದ್ದು, ಅಣೆಕಟ್ಟೆಗಳ ಸುರಕ್ಷತೆಗೆ ಸಂಸ್ಥೆ ಸ್ಥಾಪಿಸುವ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಗೊತ್ತಾಗಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಜಮೀನು ಹಂಚಿಕೆ ನೀತಿಗೂ ತಿದ್ದುಪಡಿ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕೂ ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಹಾಗೆಯೇ, ೪೧ ಕೋಟಿ ರೂ. ವೆಚ್ಚದಲ್ಲಿ ೧೬೪ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ವಾಹನ ಖರೀದಿ ನಬಾರ್ಡ್ ಪ್ರಾಯೋಜಿತ ಯೋಜನೆಗಳಡಿ ಕೃಷಿ ವಿಶ್ವವಿದ್ಯಾಲಯಗಳ ಸುಮಾರು ೭೯ ಕೋಟಿ ರೂ. ವೆಚ್ಚದ ಸಿವಿಲ್ ಕಾಮಗಾರಿಗಳಿಗೆ ಆಡಳಿತಾತ್ಮಕ ಅಉಮೋದನೆಯನ್ನು ಸಚಿವ ಸಂಪುಟ ನೀಡಲಿದೆ ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಅನುಮೋದನೆಗೊಂಡಿರುವ ಬೆಳಗಾವಿಯ ಬೈಲವಂಗಲ, ಕಲಬುರಗಿಯ ಜೇವರ್ಗಿ, ಕೊಪ್ಪಳದ ಕುಷ್ಠಗಿಯಲ್ಲಿ ತಾಯಿ, ಮಕ್ಕಳ ಆಸ್ಪತ್ರೆಗಳ ೯೩ ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿ, ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯಲ್ಲಿ ಸಾರ್ವಜನಿಕ ಆಸ್ಪತ್ರೆಯ ಜತೆಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗಳ ೨೭ ಕೋಟಿ ರೂ. ಅಂದಾಜು ಪಟ್ಟಿಗೂ ಆಡಳಿತಾತ್ಮಕ ಅನುಮೋದನೆ ಸಂಪುಟ ನೀಡಲಿದೆ ಎಂದು ಹೇಳಲಾಗಿದೆ.
ಕೋವಿಡ್ ೩ನೇ ಅಲೆಯನ್ನು ತಡೆಯುವ ಸಿದ್ಧತೆಗಾಗಿ ೩೧೭ ಕೋಟಿಗಳ ಮೊತ್ತದ ಉಪಕರಣ ಮತ್ತು ಪರಿಕರಗಳನ್ನು ಖರೀದಿಸಲು ಹಾಗೂ ೫೨ ಕೋಟಿ ರೂ. ಮೊತ್ತದ ಸಿವಿಲ್ ಕಾಮಗಾರಿಗಳಿಗೂ ಆಡಳಿತಾತ್ಮಕ ಅನುಮೋದನೆ ಸಿಗಲಿದೆ/
ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಅಪರ ನಿಬಂಧಕರ ಹುದ್ದೆಗಳಿಗೆ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ವೃಂದದ ಅಧಿಕಾರಿಗಳನ್ನು ಗುತ್ತಿಗೆಯಾಧಾರದ ಮೇಲೆ ನೇಮಕ ಮಾಡಲು ಸಂಪುಟ ಒಪ್ಪಿಗೆ ಕೊಡಲಿದೆ ಎಂದು ಹೇಳಲಾಗಿದೆ.
ಈ ಎಲ್ಲ ವಿಚಾರಗಳ ಜತೆಗೆ ೨೦೨೨ನೇ ಸಾಲಿನ ಸಾರ್ವತ್ರಿಕ ರಜೆ ಮತ್ತು ಪರಿಮಿತಿ ರಜೆಗಳ ಬಗ್ಗೆಯೂ ಸಂಪುಟ ಸಭೆ ತೀರ್ಮಾನ ಕೈಗೊಳ್ಳಲಿದೆ. ಕರ್ನಾಟಕ ಸಿವಿಲ್ ಸೇವೆಗಳ ತಿದ್ದುಪಡಿ ವಿಧೇಯಕಕ್ಕೂ ಸಂಪುಟ ಅನುಮೋದನೆ ನೀಡಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಮೂಡಬಿದ್ರೆ ತಾಲ್ಲೂಕಿನ ೯೩ ಹಳ್ಳಿಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಒದಗಿಸುವ ೧೪೫.೪೮ ಕೋಟಿ ರೂ.ಗಳ ಯೋಜನೆಯ ಅನುಮೋದನೆ ಜತೆಗೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಗುತ್ತಿ ಬಸವಣ್ಣ ಕುಡಿಯುವ ನೀರು ಒದಗಿಸುವ ಯೋಜನೆಯ ೯೯೦ ಕೋಟಿ ರೂ. ಮೊತ್ತದ ಯೋಜನೆಗೆ ಘಟನೋತ್ಥರ ಅನುಮೋದನೆಯನ್ನೂ ಸಚಿವ ಸಂಪುಟ ನೀಡಲಿದೆ.