ಕೀವ್ (ಉಕ್ರೇನ್), ಜೂ.೮- ರಷ್ಯಾ ವಶದಲ್ಲಿರುವ ಉಕ್ರೇನ್‌ನ ನೋವಾ ಕಖೋವ್ಕಾದಲ್ಲಿನ ಬೃಹತ್ ಅಣೆಕಟ್ಟಿಗೆ ಹಾನಿಯಾಗಿ, ಸದ್ಯ ೬೦ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ನೆರೆ ವಾತಾವರಣ ಸೃಷ್ಟಿಯಾಗಿದೆ. ಇದರ ಹೊರತಾಗಿಯೂ ಜಾಗತಿಕ ಮಟ್ಟದಲ್ಲಿ ದೇಶಗಳು ಯಾವುದೇ ನೆರವನ್ನು ಘೋಷಿಸದೇ ಇರುವುದಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತೀರಾ ಅಚ್ಚರಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ವಿಶ್ವಸಂಸ್ಥೆ ಮತ್ತು ರೆಡ್ ಕ್ರಾಸ್ ಸಂಸ್ಥೆಗಳು ಬೃಹತ್ ಕಖೋವ್ಕಾ ಅಣೆಕಟ್ಟಿನ ವಿನಾಶದ ಹೊರತಾಗಿಯೂ ಉಕ್ರೇನ್‌ಗೆ ನೆರವನ್ನು ನೀಡಲು ವಿಫಲವಾಗಿದೆ ಎಂದು ಝೆಲೆನ್ಸ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಶ್ವದ ಪ್ರಮುಖ ಮಾಧ್ಯಮ ಸಂಸ್ಥೆಗಳಿಗೆ ಹೇಳಿಕೆ ನೀಡಿರುವ ಝೆಲೆನ್ಸ್ಕಿ, ಅಣೆಕಟ್ಟಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದರೂ ವಿಶ್ವ ಸಮುದಾಯ ಇತ್ತ (ಉಕ್ರೇನ್) ತಲೆಹಾಕಿಲ್ಲ. ಇದು ತೀರಾ ಆಘಾತ ಮೂಡಿಸಿದೆ. ನಾವು ಜನರಿಗೆ ನೆರವು ನೀಡುವ ವೇಳೆ ರಷ್ಯಾ ಯೋಧರು ದೂರದಿಂದಲೇ ಗುಂಡು ಹಾರಿಸುತ್ತಿದ್ದಾರೆ. ಖೆರ್ಸನ್ ಪ್ರದೇಶದಲ್ಲಿನ ಪರಿಸರ ಮತ್ತು ಮಾನವೀಯ ಪರಿಸ್ಥಿತಿಯ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ. ಅದೂ ಅಲ್ಲದೆ ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ಅವರು ಅಂತಾರಾಷ್ಟ್ರೀಯ ಮಾನವೀಯ ಸಂಸ್ಥೆಗಳು ತುರ್ತು ನೆರವು ನೀಡುವಂತೆ ಒತ್ತಾಯಿಸಿದರು. ರಷ್ಯಾ ಆಕ್ರಮಿಸಿಕೊಂಡಿರುವ ಖೆರ್ಸನ್ ಪ್ರಾಂತ್ಯದಿಂದ ಜನರನ್ನು ಸ್ಥಳಾಂತರಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ನಾವು ನಿಮಗೆ ಮನವಿ ಮಾಡುತ್ತೇವೆ. ಆಕ್ರಮಣಕಾರರು (ರಷ್ಯಾ) ಮರಣದಂಡನೆ ವಿಧಿಸಿದ ಜನರ ಜೀವಗಳನ್ನು ನಾವು ಉಳಿಸಬೇಕು. ರಷ್ಯಾದ ಆಕ್ರಮಣಕಾರರು ಈ ಜನರಿಗೆ ಸಹಾಯ ಮಾಡುವ ಪ್ರಯತ್ನವನ್ನು ಸಹ ಮಾಡುವುದಿಲ್ಲ, ಅವರು ಅವರನ್ನು ನಾಶಮಾಡಲು ಬಿಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.