ಅಣಬೆ ಮಹತ್ವ

ಅಣಬೆ ಬಾಯಿಗೆ ರುಚಿ ಮಾತ್ರವಲ್ಲ, ಅದರಲ್ಲಿ ದೇಹಕ್ಕೆ ಅಗತ್ಯವಿರುವ ಅನೇಕ ಅಂಶಗಳೂ ತುಂಬಿಕೊಂಡಿವೆ. ಅಣಬೆಯಲ್ಲಿನ ಪ್ರೊಟೀನ್, ವಿಟಮಿನ್, ಮಿನರಲ್, ಅಮಿನೊ ಆಸಿಡ್, ಆಂಟಿ ಬಯಾಟಿಕ್, ಮತ್ತು ಆಂಟಿ ಯಾಕ್ಸಿಡಂಟ್ ಅಂಶಗಳು ಆರೋಗ್ಯಕ್ಕೆ ಪೂರಕ. ಮಶ್ರೂಮ್ ನಲ್ಲಿ ದೇಹಕ್ಕೆ ಅಗತ್ಯವಾದ ಇನ್ನೂ ಹಲವು ಅಂಶಗಳಿವೆ.

ಶಕ್ತಿಯನ್ನು ನೀಡಲು ಆಹಾರವನ್ನು ಗ್ಲೂಕೋಸ್ ಆಗಿ ಪರಿವರ್ತನೆ ಮಾಡುವಲ್ಲಿ ವಿಟಮಿನ್ ಬಿ ತುಂಬಾ ಅಗತ್ಯ. ಅಣಬೆಯಲ್ಲಿ ಅತಿ ಹೆಚ್ಚು ವಿಟಮಿನ್ ಬಿ೨ ಮತ್ತು ಬಿ೩ ಇರುವುದರಿಂದ ದೇಹಕ್ಕೆ ಇದು ಹೆಚ್ಚು ಅಗತ್ಯ. ಮಶ್ರೂಮ್ ನಲ್ಲಿ ಕೊಲೆಸ್ಟ್ರಾಲ್, ಬೊಜ್ಜಿನ ಅಂಶವಿಲ್ಲ ಮತ್ತು ಕಡಿಮೆ ಕಾರ್ಬೊ ಹೈಡ್ರೇಡ್ ಹೊಂದಿದೆ. ಅಷ್ಟೇ ಅಲ್ಲ ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಬೊಜ್ಜು ಕರಗಿಸುವುದು ಸುಲಭ.

ಇದರಲ್ಲಿನ ಕೆಲವು ಎಂಜೈಮು ಅಣಬೆ ಜೀರ್ಣವಾದ ನಂತರ ಕೊಲೆಸ್ಟ್ರಾಲ್ ಕರಗಿಸಲು ಸಹಾಯ ಮಾಡುತ್ತದೆ. ಧುಮೇಹಿಗಳೂ ಕೂಡ ಅಣಬೆ ತಿನ್ನಬಹುದು. ಏಕೆಂದರೆ ಇದರಲ್ಲಿ ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ ಸೇವನೆಯಿಂದ ತೊಂದರೆಯಿಲ್ಲ.

ಇದರಲ್ಲಿನ ನೈಸರ್ಗಿಕ ಇನ್ಸುಲಿನ್ ಮತ್ತು ಎಂಜೈಮುಗಳು ಸೇವಿಸಿದ ಆಹಾರದಲ್ಲಿನ ಸಕ್ಕರೆ ಮತ್ತು ಸ್ಟಾರ್ಚ್ ಅಂಶವನ್ನು ತೆಗೆದುಹಾಕುತ್ತದೆ. ಎರ್ಗೊಥಿಯಾನೈನ್ ಎಂಬ ಅತಿ ಶಕ್ತಿಯುತ ಆಂಟಿ ಯಾಕ್ಸಿಡಂಟ್ ಇದರಲ್ಲಿರುವದರಿಂದ ರೋಗಗಳಿಂದ ದೂರವಿರಿಸಲು ದೇಹಕ್ಕೆ ರೋಗ ನಿರೋಧಕ ಶಕ್ತಿ ಒದಗಿಸುತ್ತದೆ.

ಇದರಲ್ಲಿನ ಆಂಟಿ ಬಯಾಟಿಕ್ ಅಂಶ ದೇಹ ಇನ್ನಿತರ ಸೋಂಕುಗಳಿಗೆ ತುತ್ತಾಗುವುದನ್ನು ತಡೆಯುತ್ತದೆ. ವಿಟಮಿನ್ ಡಿ ಹೊಂದಿರುವ ಏಕೈಕ ತರಕಾರಿಯೆಂದರೆ ಅಣಬೆ. ಅಷ್ಟೇ ಅಲ್ಲ, ಅಣಬೆಯಲ್ಲಿ ಎಲುಬಿಗೆ ಶಕ್ತಿ ನೀಡುವ ಕ್ಯಾಲ್ಸಿಯಂ, ರಕ್ತಹೀನತೆ ನಿವಾರಿಸುವ ಕಬ್ಬಿಣಾಂಶ ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಸಹಕರಿಸುವ ಪೊಟಾಶಿಯಂ ಪೂರಕವಾಗಿದೆ