ಅಡ್ವಾಣಿ ಜನ್ಮದಿನಕ್ಕೆ ಮೋದಿ ಶುಭಾಶಯ

ನವದೆಹಲಿ, ನ. ೮- ಹಿರಿಯ ಬಿಜೆಪಿ ಮುಖಂಡ ಎಲ್. ಕೆ. ಅಡ್ವಾಣಿ ಅವರು ಇಂದು ೯೪ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಭಕೋರಿದ್ದಾರೆ. ಗೌರವಾನ್ವಿತ ಅಡ್ವಾಣಿ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ. ಜನರನ್ನು ಸಬಲೀಕರಣಗೊಳಿಸಲು ಮತ್ತು ನಮ್ಮ ಸಾಂಸ್ಕೃತಿಕ ಹೆಮ್ಮೆಯನ್ನು ಹೆಚ್ಚಿಸಲು ಅವರ ಹಲವಾರು ಪ್ರಯತ್ನಗಳಿಗಾಗಿ ರಾಷ್ಟ್ರವು ಅವರಿಗೆ ಋಣಿಯಾಗಿದೆ. ಅವರ ಪಾಂಡಿತ್ಯಪೂರ್ಣ ಅನ್ವೇಷಣೆಗಳು ಮತ್ತು ಬುದ್ಧಿಶಕ್ತಿಗಾಗಿ ಅವರು ವ್ಯಾಪಕವಾಗಿ ಗೌರವಿಸಲ್ಪಡುತ್ತಾರೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ನಂತರ ಪ್ರಧಾನಿಯವರು ಅಡ್ವಾಣಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಜನ್ಮದಿನದ ಶುಭಾಶಯ ಕೋರಿದ್ದಾರೆ.
ನವೆಂಬರ್ ೮, ೧೯೨೭ ರಂದು ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಅಡ್ವಾಣಿ ಅವರು ೧೯೯೮-೨೦೦೪ ರ ಅವಧಿಯಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ೨೦೦೨ ರಿಂದ ೨೦೦೪ ರವರೆಗೆ ಭಾರತದ ಉಪ ಪ್ರಧಾನ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು.
ಬಿಜೆಪಿಯನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ದು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಎಲ್. ಕೆ. ಅಡ್ವಾಣಿ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಟ್ವೀಟ್ ಮೂಲಕ ಶುಭಾಶಯ ಸಲ್ಲಿಸಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಭದ್ರ ನೆಲೆಯನ್ನು ಕಲ್ಪಿಸಿದ ಪಕ್ಷದ ಅಭಿವೃದ್ದಿಗೆ ಅಪಾರ ಕೊಡುಗೆ ನೀಡಿದ ಬಿಜೆಪಿ ಭೀಷ್ಮ ಎಂದೇ ಖ್ಯಾತರಾದ ಎಲ್.ಕೆ. ಅಡ್ವಾಣಿ ಜನ್ಮದಿನದ ಶುಭಾಶಯಗಳು ಎಂದು ಕರ್ನಾಟಕ ಬಿಜೆಪಿಯೂ ಟ್ವೀಟ್ ಮಾಡಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಡ್ವಾಣಿ ಅವರನ್ನು ಸ್ಫೂರ್ತಿ ಮತ್ತು ಮಾರ್ಗದರ್ಶಕ ಎಂದು ಶ್ಲಾಘಿಸಿದರು ಮತ್ತು ಅವರ ಪಾಂಡಿತ್ಯ, ದೂರದೃಷ್ಟಿ ಮತ್ತು ಬುದ್ಧಿಶಕ್ತಿಯನ್ನು ಎಲ್ಲರೂ ಒಪ್ಪಿಕೊಳ್ಳುವ ಅತ್ಯಂತ ಗೌರವಾನ್ವಿತ ನಾಯಕರಲ್ಲಿ ಅವರನ್ನು ಪರಿಗಣಿಸಲಾಗಿದೆ ಎಂದು ಹೇಳಿದರು.