ಅಡ್ಡಪಲ್ಲಕ್ಕಿ ಉತ್ಸವ

ನವಲಗುಂದ,ಮಾ12 : ತಾಲ್ಲೂಕಿನ ನಾಗನೂರ-ಸೊಟಕನಾಳ ಗ್ರಾಮದಲ್ಲಿ ಶಿವರಾತ್ರಿ ಪ್ರಯುಕ್ತ ಶಿವಾನಂದ ಸ್ವಾಮೀಜಿಯವರ ಜಾತ್ರಾ ಮಹೋತ್ಸವ, ಅಡ್ಡಪಲ್ಲಕ್ಕಿ ಉತ್ಸವ, ಅಧ್ಯಾತ್ಮ ಪ್ರವಚನ ಕಾರ್ಯಕ್ರಮಗಳು ಜರುಗಿದವು.ಬೆಳಿಗ್ಗೆ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪೂಜೆ, ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು.

ಸಾನ್ನಿಧ್ಯ ವಹಿಸಿದ್ದ ಸಮರ್ಥ ಶಿವಾನಂದ ಶ್ರೀ ಮಾತನಾಡಿ, ಜಾತ್ರಾ ಮಹೋತ್ಸವದ ಮೂಲ ಉದ್ದೇಶ ಮಾನವ ಜನ್ಮದ ಸಾರ್ಥಕತೆ. ಈ ಉದ್ದೇಶದಿಂದಲೇ ಶ್ರೀಗಳು ನಾಗನೂರ ಗ್ರಾಮದಲ್ಲಿ ಮಠ ಸ್ಥಾಪನೆ ಮಾಡಿದ್ದಾರೆ. ಈ ವರ್ಷ ಉತ್ತಮ ಮಳೆ, ಬೆಳೆ ಆಗಿ ಜೀವಕುಲ ಸಂತುಷ್ಟವಾಗಲಿ ಎಂದು ಹಾರೈಸಿದರು.

ಬಸವರಾಜ ಪಂಡಿತರು ಮಾತನಾಡಿ, ಆಡಂಬರದ ಆಚರಣೆಗಳಿಲ್ಲದೆ ಜಾತ್ರೆ ನಡೆಯುವುದು ಇಲ್ಲಿನ ವಿಶೇಷತೆ. ಮನುಷ್ಯ ಅಜ್ಞಾನ ಕಳೆದುಕೊಳ್ಳಬೇಕಾದರೆ ಉತ್ತಮ ಚಿಂತನೆ, ಸತ್ಸಂಗದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಅಡ್ಡಪಲ್ಲಕ್ಕಿ ಉತ್ಸವದ ನಂತರ ಆಧ್ಯಾತ್ಮಿಕ, ಧಾರ್ಮಿಕ ಪ್ರವಚನ ಕಾರ್ಯಕ್ರಮ ಜರುಗಿತು. ಈ ವೇಳೆ ನಾಗನೂರ -ಸೊಟಕನಾಳ ಗ್ರಾಮ ಹಾಗೂ ತಾಲ್ಲೂಕಿನ ಭಕ್ತರು ಹಾಜರಿದ್ದರು.