ಅಡ್ಡಂಡ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಣಯ

ಮೈಸೂರು: ಮಾ.26:- ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಶ್ರೀಗಳ ಕುರಿತಂತೆ ನೀಡಿರುವ ಹೇಳಿಕೆ ಕುರಿತು ಕಾನೂನು ಹೋರಾಟ ನಡೆಸಲು ಒಕ್ಕಲಿಗ ಸಂಘಟನೆಗಳು ತೀರ್ಮಾನಿಸಿದವು.
ಕುವೆಂಪುನಗರದ ಬಂದಂತಮ್ಮ ಕಾಳಮ್ಮ ಸಮುದಾಯ ಭವನದಲ್ಲಿ ಶನಿವಾರ ಸಂಜೆ ನಡೆಸಿದ ಸಭೆಯಲ್ಲಿ ಸಮುದಾಯದ ಹಲವು ನಾಯಕರು ಪಾಲ್ಗೊಂಡು ಅಡ್ಡಂಡ ಹೇಳಿಕೆಯನ್ನು ಖಂಡಿಸಿದರು. ಅನೇಕರು ಬೃಹತ್ ಪ್ರತಿಭಟನೆಯ ಬಗ್ಗೆ ಸಲಹೆ ನೀಡಿದರು. ಆದರೆ, ಅಂತಿಮವಾಗಿ ಚುಂಚಶ್ರೀಗಳೇ ದೂರವಾಣಿ ಮೂಲಕ ಮಾತನಾಡಿ, ಸದ್ಯ ಯಾವುದೇ ಪ್ರತಿಭಟನೆ ನಡೆಸದಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಮೈಸೂರು-ಚಾಮರಾಜನಗರ ಒಕ್ಕಲಿಗರ ಸಂಘದಿಂದ ಅಧಿಕೃತವಾಗಿ ಅಡ್ಡಂಡ ಕಾರ್ಯಪ್ಪ ವಿರುದ್ಧ ಕಾನೂನು ಹೋರಾಟ ನಡೆಸುವ ತೀರ್ಮಾನಕ್ಕೆ ಬರಲಾಯಿತು. ಉರಿಗೌಡ, ನಂಜೇಗೌಡ ಪರ- ವಿರೋಧ ಯಾರೇ ಚರ್ಚಿಸಿದರು ಅಂತಹವರನ್ನು ಖಂಡಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು. ಅಲ್ಲದೆ, ಅವಶ್ಯಕತೆ ಬಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಸಹ ನೀಡಲಾಯಿತು. ಪ್ರತಿ ಮೂರು ತಿಂಗಳಿಗೊಮ್ಮೆ ಇಂತಹ ಸಭೆ ನಡೆಸಲು ತೀರ್ಮಾನಿಸಲಾಯಿತು.
ಮಾಜಿ ಶಾಸಕ ವಾಸು ಮಾತನಾಡಿ, ನಮ್ಮ ಅಧಿಕಾರದ ಅವಧಿಯಲ್ಲಿ ಸಮುದಾಯದ ಬಗ್ಗೆ ಇಂತಹ ವಿಚಾರಗಳು ಬಂದಾಗ ಪಕ್ಷ ಹಾಗೂ ಸರ್ಕಾರವನ್ನು ನೋಡದೇ ನಾವು ವಿರೋಧಿಸಿದ್ದೇವೆ. ಆದರೆ, ಇಂದು ಸಮುದಾಯದ ನಾಯಕರು ಅಂತಹ ಕೆಲಸ ಮಾಡುತ್ತಿಲ್ಲ. ಇದಕ್ಕೆ ನೇರವಾಗಿ ಸಮುದಾಯವೇ ಹೊಣೆ. ಯಾಕೆಂದರೆ ಆಳುತ್ತಿರುವ ಸರ್ಕಾರದಲ್ಲಿರುವ ಸಮುದಾಯದ ನಾಯಕರನ್ನು ಈ ಬಗ್ಗೆ ಪಕ್ಷಾತೀತವಾಗಿ ವಿರೋಧಿಸಿ ಮಾತನಾಡುವಂತೆ ಸವಾಲು ಹಾಕಿದರು.
ಕಾಂಗ್ರೆಸ್ ಮುಖಂಡ ಹರೀಶ್‍ಗೌಡ ಮಾತನಾಡಿ, ಅಡ್ಡಂಡ ಕಾರ್ಯಪ್ಪ ಸಮುದಾಯದ ಸ್ವಾಮೀಜಿ ಕುರಿತು ಇಂತಹ ಹೇಳಿಕೆ ನೀಡಿರುವುದರ ಹಿಂದೆ ಬಿಜೆಪಿ ನಾಯಕರಾದ ಅಶ್ವಥ್‍ನಾರಾಯಣ್, ಸಿ.ಟಿ.ರವಿ ಹಾಗೂ ಆಶೋಕ್ ಅವರಿದ್ದಾರೆ. ನಮ್ಮ ಸಮುದಾಯದವರಿಂದಲೇ ನಮ್ಮನ್ನು ಎತ್ತಿ ಕಟ್ಟುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಸಮುದಾಯ ಒಗ್ಗೂಡಿ ಮತ್ತೊಮ್ಮೆ ಯಾರು ರಾಜಕೀಯಕ್ಕೂ ಶ್ರೀಗಳ ಬಗ್ಗೆ ಮಾತನಾಡದಂತೆ ನೋಡಿಕೊಳ್ಳುವ ರೀತಿಯಲ್ಲಿ ಉತ್ತರಿಸುವ ಅವಶ್ಯಕತೆಯಿದೆ ಎಂದರು.
ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಕೆ.ವಿ.ಶ್ರೀಧರ್, ಕಾರ್ಯಾಧ್ಯಕ್ಷ ಸಿ.ಜೆ.ಗಂಗಾಧರ್, ರಾಜ್ಯ ನಿರ್ದೇಶಕ ಸಿ.ಎನ್.ಮಂಜೇಗೌಡ, ನಗರಪಾಲಿಕೆ ಸದಸ್ಯೆ ಪುಷ್ಪಲತಾ ಜಗನ್ನಾಥ್, ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಚೇತನ್, ಉಪಾಧ್ಯಕ್ಷ ರವಿರಾಜಕೀಯ ನಿರ್ದೇಶಕರಾದ ಪ್ರಶಾಂತ್‍ಗೌಡ, ಕುಮಾರಗೌಡ, ನಾಗಣ್ಣ, ಗಿರೀಶ್‍ಗೌಡ, ಗುರುರಾಜು, ಉಮೇಶ್, ಸುಶೀಲಾ ನಂಜಪ್ಪ, ಸಂಘದ ಗೌರವಾಧ್ಯಕ್ಷ ಹಾಲತ್ತೂರು ಜಯರಾಮು, ಸಹಕಾರ್ಯದರ್ಶಿ ಜಯರಾಮು, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ, ನಮ್ಮೂರು ನಮ್ಮೋರು ಟ್ರಸ್ಟ್ ಅಧ್ಯಕ್ಷ ಸತೀಶ್‍ಗೌಡ, ಒಕ್ಕಲಿಗರ ಹಿತರಕ್ಷಣಾ ವೇದಿಕೆಯ ಯಮುನಾ, ಒಕ್ಕಲಿಗರ ಹಿತಚಿಂತಕ ಚಾವಡಿಯ ಮೋಹನ್‍ಕುಮಾರ್‍ಗೌಡ, ಶಂಕರ್, ರವಿಗೌಡ ಇನ್ನಿತರರು ಉಪಸ್ಥಿತರಿದ್ದರು.