ಅಡ್ಕದಲ್ಲಿ ಗುಂಡಿನ ದಾಳಿ: ಆರೋಪಿ ಸೆರೆ

ಉಪ್ಪಳ, ನ.೨- ಬಂದ್ಯೋಡು ಸಮೀಪದ ಅಡ್ಕದಲ್ಲಿ ನಡೆದ ಗುಂಡಿನ ದಾಳಿ ಹಾಗೂ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಯೋರ್ವನನ್ನು ಪೊಲಿಸರು ಬಂಧಿಸಿದ್ದು, ನಾಲ್ಕು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂದ್ಯೋಡು ಕುಕ್ಕಾರಿನ ಉಪ್ಪಳ ಕುಕ್ಕಾರಿನ ಟಿಕ್ಕಿ ಅಮ್ಮಿ ಯಾನೆ ಅಬ್ದುಲ್ ಅಮೀರ್ (೩೦) ಬಂಧಿತ ಆರೋಪಿ. ಮೂರು ಘಟನೆಗಳಿಗೆ ಸಂಬಂಧಪಟ್ಟಂತೆ ೧೧ ಮಂದಿ ವಿರುದ್ಧ ಕೊಲೆ ಯತ್ನ ಮೊಕದ್ದಮೆ ಹೂಡಲಾಗಿದೆ. ಅಮೀರ್ ನ ನೇತೃತ್ವದಲ್ಲಿ ಮಿನಿ ಲಾರಿಯಲ್ಲಿ ಬಂದ ಆರು ಮಂದಿಯ ತಂಡವು ಲಾರಿಯನ್ನು ಎದುರಿನಿಂದ ಬರುತ್ತಿದ್ದ ಶೇಕಾಲಿ ಎಂಬವರ ಕಾರಿಗೆ ಡಿಕ್ಕಿ ಹೊಡೆಸಿದ್ದು, ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಕಂಬಕ್ಕೆ ಬಡಿದಿತ್ತು. ಈ ಸಂದರ್ಭದಲ್ಲಿ ಕಾರಿನಲ್ಲಿದ್ದವರು ತಲವಾರಿನಿಂದ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಅಮೀರ್ ನೇತೃತ್ವದ ತಂಡವು ಕಾರಿನ ಮೇಲೆ ಎರಡು ಬಾರಿ ಗುಂಡು ಹಾರಿಸಿತ್ತು. ಈ ನಡುವೆ ದೂರು ನೀಡಲು ಶೇಕಾಲಿ ಹಾಗೂ ಪತ್ನಿ ಕುಂಬಳೆ ಪೊಲೀಸ್ ಠಾಣೆ ಗೆ ಇನ್ನೊಂದು ಕಾರಿನಲ್ಲಿ ತೆರಳುತ್ತಿದ್ದಾಗ ಅಮೀರ್ ನೇತೃತ್ವದ ತಂಡವು ಇನ್ನೊಂದು ಕಾರಿನಲ್ಲಿ ಬಂದು ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದಲ್ಲದೆ ಶೇಕಾಲಿರವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ಮಾರುತಿ ಕಾರನ್ನು ಹಾನಿಗೊಳಿಸಿದ ತಂಡವು ಗುಂಡು ಹಾರಿಸಿದೆ. ಒಟ್ಟು ಮೂರು ಪ್ರಕರಣಗಳನ್ನು ಕುಂಬಳೆ ಪೊಲೀಸರು ದಾಖಲಿಸಿದ್ದು, ಮೊಯಿದಿನ್ ಶಬೀರ್, ತಳಂಗರೆಯ ಅಚ್ಚು, ಸಮದ್, ಆರಿಕ್ಕಾಡಿ ಗುಂಡು ಉಸ್ಮಾನ್, ಲತೀಫ್, ಜೋಯಿ, ಟಯರ್ ಪೈಝಲ್ ಮೊದಲಾದವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಪೈಕಿ ಮೊಯ್ದೀನ್ ಶಬೀರ್ ಮತ್ತು ಲತೀಫ್ ಎರಡು ವರ್ಷಗಳ ಹಿಂದೆ ಉಪ್ಪಳ ಸೋಂಕಾಲು ಪುಳಿಕುತ್ತಿಯ ಅಲ್ತಾಫ್ ಎಂಬವರನ್ನು ಕಾರಿನಲ್ಲಿ ಅಪಹರಿಸಿ ಕರ್ನಾಟಕಕ್ಕೆ ಕೊಂಡೊಯ್ದು ಕೊಲೆಗೈದ ಪ್ರಕರಣದ ಆರೋಪಿಗಳಾಗಿದ್ದಾರೆ. ಇನ್ನೋರ್ವ ಆರೋಪಿ ಮೂರೂವರೆ ವರ್ಷಗಳ ಹಿಂದೆ ಕಯ್ಯಾರ್ ಮಂಡೆಕಾಪು ಎಂಬಲ್ಲಿ ವ್ಯಾಪಾರಿ ರಾಮಕೃಷ್ಣ ಕುಲಾಲ್ ಎಂಬವರನ್ನು ಹಾಡಹಗಲೇ ಅಂಗಡಿಯಲ್ಲೇ ಕೊಲೆಗೈದ ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲಾ ಆರೋಪಿಗಳ ವಿರುದ್ಧ ಐದಕ್ಕೂ ಅಧಿಕ ಪ್ರಕರಣಗಳು ವಿವಿದೆಡೆ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು ಡಿವೈಎಸ್ ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸುತ್ತಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ. ಕುಂಬಳೆ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಪಿ. ಪ್ರಮೋದ್, ಸಬ್ ಇನ್ಸ್ ಪೆಕ್ಟರ್ ಎ. ಸಂತೋಷ್ ಕುಮಾರ್, ಎಎಸ್ ಐ ರಾಜೀವನ್ ಮೇಲ್ನೋಟದಲ್ಲಿ ತನಿಖೆ ನಡೆಯುತ್ತಿದೆ.