ಅಡುಗೆ ಉಪಕರಣ ಹಂಚಿದ ಆರೋಪ; ಪ್ರಕರಣ ದಾಖಲು

ದಾವಣಗೆರೆ.ಮಾ.೩೦: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಅಕ್ರಮಗಳಿಗೆ ಕಡಿವಾಣ ಹಾಕಲು‌ ಕೇಂದ್ರ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿರುದ್ಧ ಅಕ್ರಮವಾಗಿ ಅಡುಗೆ ಉಪಕರಣ ಹಂಚಿದ ಆರೋಪದ ಮೇಲೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ಕರಣದಲ್ಲಿ ಶಾಮನೂರು ಶಿವಶಂಕರಪ್ಪ ಮೊದಲ ಆರೋಪಿಯಾದರೆ ಎಸ್. ಎಸ್. ಮಲ್ಲಿಕಾರ್ಜುನ್ 2 ನೇ ಆರೋಪಿ. ಅಕ್ರಮವಾಗಿ ಕುಕ್ಕರ್, ಸೀರೆ, ಅಡುಗೆ ಉಪಕರಣಗಳು ಇದ್ದ ಬಾಕ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಇವುಗಳ ಮೇಲೆ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಶಾಮನೂರು ಶಿವಶಂಕರಪ್ಪರ ಭಾವಚಿತ್ರವಿದ್ದು, ಈ ಕಾರಣಕ್ಕೆ ಪ್ರಕರಣ ದಾಖಲಿಸಲಾಗಿದೆ. ಈ ವಿಚಾರವನ್ನು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.‌ಬಿ. ರಿಷ್ಯಂತ್ ಖಚಿತಪಡಿಸಿದ್ದಾರೆ. 

ಕಾಂಗ್ರೆಸ್ ಶಾಸಕ ಶಾಮನೂರ ಶಿವಶಂಕರಪ್ಪ, ಮಲ್ಲಿಕಾರ್ಜುನ್ ಭಾವಚಿತ್ರವಿರುವ ಲಕ್ಷಾಂತರ ಮೌಲ್ಯದ ಅಡುಗೆ ಸಲಕರಣೆ ಪತ್ತೆಯಾಗಿದೆ. ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭಗತ್ ಸಿಂಗ್ ನಗರದಲ್ಲಿ ಮತದಾರರಿಗೆ ಹಂಚಲೆಂದು ಸಂಗ್ರಹಿಸಿದ್ದ 7.19 ಲಕ್ಷ ರೂಪಾಯಿ ಮೌಲ್ಯದ ಅಡುಗೆ ಸಲಕರಣೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಅಡುಗೆ ಸಲಕರಣೆಗಳ ಮೇಲೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಪುತ್ರ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭಾವಚಿತ್ರವಿದ್ದ ಅಡುಗೆ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಡಜ್ಜಿ ಹನಮಂತಪ್ಪ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಇನ್ನು ಪ್ರಕರಣದಲ್ಲಿ ಶಾಮನೂರು ಶಿವಶಂಕರಪ್ಪ ಎ1 ಹಾಗೂ ಮಲ್ಲಿಕಾರ್ಜುನ್ ಎ2 ಆರೋಪಿಯಾಗಿದ್ದಾರೆ.