ಅಡುಗೆ ಅನಿಲ ದರ ಮತ್ತೇ ಏರಿಕೆ

ನವದೆಹಲಿ,ಅ.೬- ಅಡುಗೆ ಅನಿಲದ ಬೆಲೆ ಮತ್ತೆ ಏರಿಕೆಯಾಗಿದ್ದು, ಗೃಹ ಬಳಕೆಯ ಪ್ರತಿ ಸಿಲಿಂಡರ್ ಅಡುಗೆ ಅನಿಲದ ದರವನ್ನು ೧೫ ರೂ. ಹೆಚ್ಚಿಸಲಾಗಿದೆ. ಬೆಲೆ ಏರಿಕೆ ತತ್‌ಕ್ಷಣದಿಂದಲೇ ಜಾರಿಗೆ ಬಂದಿದ್ದು, ಅಡುಗೆ ಸಿಲಿಂಡರ್ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ.
ಕಳೆದ ೨ ತಿಂಗಳಿನಿಂದ ಅಡುಗೆ ಅನಿಲ ಬೆಲೆಯನ್ನು ೪ನೇ ಬಾರಿಗೆ ಏರಿಕೆಯಾಗಿದೆ. ಪೆಟ್ರೋಲ್-ಡೀಸಲ್, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಅಡುಗೆ ಅನಿಲದ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಜ. ೧ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಗೃಹ ಬಳಕೆಯ ಅಡುಗೆ ಅನಿಲದ ಸಿಲಿಂಡರ್ ಬೆಲೆ ೧೯೦ ರೂ.ಗಳಷ್ಟು ಹೆಚ್ಚಳವಾಗಿತ್ತು, ಈಗ ೧೫ ರೂ. ಏರಿಕೆ ಮೂಲಕ ಕಳೆದ ೯ ತಿಂಗಳಲ್ಲಿ ಸಿಲಿಂಡರ್‌ನ ಬೆಲೆ ೨೦೫ ರೂ.ಗಳಷ್ಟು ಹೆಚ್ಚಾದಂತಾಗಿದೆ. ಅದರಲ್ಲೂ ಕಳೆದ ೨ ತಿಂಗಳಲ್ಲಿ ೪ನೇ ಬಾರಿಗೆ ಹೆಚ್ಚಳ ಮಾಡಿರುವುದು ಜನಸಾಮಾನ್ಯರ ಬದುಕು ದುಸ್ತರವಾಗಿದೆ.
ಪ್ರತಿ ತಿಂಗಳ ಮೊದಲ ದಿನ ತೈಲ ಕಂಪನಿಗಳು ಅಡುಗೆ ಅನಿಲದ ದರವನ್ನು ಪರಿಷ್ಕರಿಸುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಅನಿಲದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಬೆಲೆಯನ್ನಾಧರಿಸಿ ಆಮದು ಶುಲ್ಕ, ಅಬಕಾರಿ ಶುಲ್ಕ, ಜಿಎಸ್‌ಟಿ ಪರಿಗಣಿಸಿ ಪ್ರತಿ ತಿಂಗಳು ಅಡುಗೆ ಅನಿಲ ಬೆಲೆಯನ್ನು ಪರಿಷ್ಕರಿಸಲಾಗುತ್ತದೆ. ಅದರಂತೆ ಈ ತಿಂಗಳು ೧೫ ರೂ. ಬೆಲೆ ಏರಿಕೆ ಮಾಡಲಾಗಿದ್ದು, ಕಳೆದ ಸೆ. ೧ ರಂದು ಪ್ರತಿ ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ೨೫ ರೂ.ಗಳಷ್ಟು ಏರಿಕೆ ಮಾಡಲಾಗಿತ್ತು.
ಕಳೆದ ಫೆಬ್ರವರಿ ತಿಂಗಳಲ್ಲೇ ಮೂರು ಬಾರಿ ದರ ಏರಿಕೆ ಮಾಡಲಾಗಿತ್ತು. ನಂತರ ಪ್ರತಿ ತಿಂಗಳು ೧ ರಂದು ದರ ಏರಿಕೆ ಪರಿಷ್ಕರಣೆ ನಡೆಯುತ್ತಿದ್ದು, ಏಪ್ರಿಲ್‌ನಲ್ಲಿ ಸಿಲಿಂಡರ್ ದರವನ್ನು ೧೦ ರೂ. ಕಡಿಮೆ ಮಾಡಲಾಗಿತ್ತು.
ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ಈ ಮೂರು ತಿಂಗಳಲ್ಲಿ ಎಲ್‌ಪಿಜಿ ಸಿಲಿಂಡರ್ ದರ ೭೫ ರೂ.ನಷ್ಟು ಏರಿಕೆ ಕಂಡಿತ್ತು.
ಅ. ೧ ರಂದು ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ೪೩ ರೂ.ಗಳಷ್ಟು ಹೆಚ್ಚಳ ಮಾಡಲಾಗಿತ್ತು. ಇಂದು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ೨ ರೂ. ಕಡಿತ ಮಾಡಲಾಗಿದೆ.

ಅಡುಗೆ ಅನಿಲದ ಬೆಲೆ ೧೫ ರೂ. ಏರಿಕೆಯಾದ ನಂತರ ಪ್ರಮುಖ ನಗರಗಳಲ್ಲಿ ಅಡುಗೆ ಅನಿಲದ ೧೪.೫ ಕೆಜಿ ಸಿಲಿಂಡರ್‌ನ ಬೆಲೆ ಈ ರೀತಿ ಇದೆ

  • ಬೆಂಗಳೂರು-೯೦೨.೫೦
  • ದೆಹಲಿ – ೮೯೯.೫೦
  • ಮುಂಬೈ- ೮೯೯.೫೦
  • ಕೊಲ್ಲತ್ತ -೯೨೬
  • ಚೆನ್ನೈ-೯೧೫.೫೦