ಅಡುಗೆ ಅನಿಲ ಏರಿಕೆ ಗ್ರಾಹಕರಿಗೆ ಬರೆ


ನವದೆಹಲಿ ,ಆ .೧೮- ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಮತ್ತೆ ೨೫ ರೂ. ಏರಿಕೆ ಮಾಡಿವೆ. ಈ ಮೂಲಕ ಗಾಯದ ಮೇಲೆ ಮತ್ತೆ ಬರೆ ಎಳೆದಿದೆ.

ವರ್ಷದ ಆರಂಭದಿಂದ ಇಲ್ಲಿಯತನಕ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಬರೋಬ್ಬರಿ ೧೬೫ ರೂಪಾಯಿ ಹೆಚ್ಚಳ ಮಾಡಲಾಗಿದೆ ಇದು ಜನಸಾಮಾನ್ಯರ ಮೇಲೆ ಕೇಂದ್ರ ಸರ್ಕಾರ ಗದಾ ಪ್ರಹಾರ ಮಾಡಿದೆ.

ಕಳೆದ ಜುಲೈ ೧ ರಂದು ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ೨೫.೫೦ ರೂ. ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ ೨೫ ರೂ. ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಗ್ರಾಹಕರ ಮೇಲೆ ಮತ್ತೆ ಹೊರೆಹಾಕಲಾಗಿದೆ.

ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್ ದರ ೮೬೨.೫ ರೂ. ದೆಹಲಿಯಲ್ಲಿ ೮೫೯.೫ ರೂ. ಮುಂಬೈನಲ್ಲಿ ೮೫೯.೫ ರೂ. ಕೋಲ್ಕತ್ತಾದಲ್ಲಿ ೮೮೬ ರೂ. ಇದೆ.

ಅಡುಗೆ ಅನಿಲ ಸಿಲಿಂಡರ್ – ಎಲ್‌ಪಿಜಿ ದರ ೨೫ ರೂಪಾಯಿ ಹೆಚ್ಚಳ ಮಾಡಲಾಗಿದೆ. ಸಾಮಾನ್ಯವಾಗಿ ತೈಲ ಮಾರ್ಕೆಟಿಂಗ್ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಬೆಲೆ ಏರಿಕೆ ಮಾಡುತ್ತಿರುವುದು ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.

ದೆಹಲಿಯಲ್ಲಿ ಈ ವರ್ಷದ ಆರಂಭದಲ್ಲಿ ಅಂದರೆ, ೨೦೨೧ರ ಶುರುವಿನಲ್ಲಿ ಸಿಲಿಂಡರ್ ಬೆಲೆ ೬೯೪ ರೂಪಾಯಿ ಇತ್ತು. ಇದೀಗ ಎಂಟು ತಿಂಗಳಲ್ಲಿ ೧೬೫ ರೂಪಾಯಿ ಹೆಚ್ಚಳ ಆಗಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ – ಡೀಸೆಲ್ ಬೆಲೆ ಮತ್ತು ಇನ್ನಿತರ ಅಗತ್ಯ ವಸ್ತುಗಳ ಬೆಲೆಯನ್ನು ಗಗನ ಮುಖಿಯಾಗಿಸುತ್ತಿರುವ ನಡುವೆಯೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮತ್ತೊಮ್ಮೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಮಾಡುವುದರಿಂದ ಜನಸಾಮಾನ್ಯರು ಬಸವಳಿಯುವಂತಾಗಿದೆ.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್, ಅಗತ್ಯವಸ್ತುಗಳ ಬೆಲೆ, ಎಣ್ಣೆಕಾಳು ಸೇರಿದಂತೆ, ಇನ್ನಿತರ ವಸ್ತುಗಳ ಬೆಲೆ ಗಗನಮುಖಿ ಆಗುತ್ತಿರುವುದು ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರು ಜೀವನ ನಿರ್ವಹಣೆಗೆ ತೊಳಲಾಡುವಂತಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಪ್ರತಿ ಸಿಲಿಂಡರ್ ಬೆಲೆ

  • ಬೆಂಗಳೂರು – ೮೬೨.೫ ರೂ
  • ದೆಹಲಿ – ೮೫೯.೫ ರೂ
  • ಮುಂಬೈ- ೮೫೯.೫ ರೂ
  • ಕೋಲ್ಕತಾ – ೮೬೬ ರೂ.