ಅಡುಗೆಮನೆಯ ಪುಟ್ಟ ‘ಬೆಳ್ಳುಳ್ಳಿʼ

ನಾವು ಸೇವಿಸುವಂತಹ ಸಾಂಬಾರು ಪದಾರ್ಥಗಳಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇದ್ದು, ಹಿಂದಿನಿಂದಲೂ ನಮ್ಮ ಹಿರಿಯರು ಸಾಂಬಾರು ಪದಾರ್ಥಗಳನ್ನು ಬಳಸಿಕೊಂಡು ಕೆಲವೊಂದು ಕಾಯಿಲೆಗಳಿಗೆ ಚಿಕಿತ್ಸೆ ನೀಡಿದರೆ, ಇನ್ನು ಕೆಲವು ರೋಗಗಳು ಬರದಂತೆ ತಡೆಯುತ್ತಿದ್ದರು.
ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ನಿಯಂತ್ರಣಕ್ಕೆ: ಚಳಿಗಾಲ ಬರುತ್ತಿರುಂತಹ ಒಣ ತಲೆಬುರುಡೆಯ ಸಮಸ್ಯೆಯು ಸಾಮಾನ್ಯವಾಗಿ ಕಾಡುವುದು. ಒಣ ತಲೆಬುರುಡೆಯಿಂದಾಗಿ ತಲೆಹೊಟ್ಟಿನ ಸಮಸ್ಯೆ ಬರುವುದು. ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ತಲೆಬುರುಡೆಯ ಚರ್ಮವು ಬಲಗೊಳ್ಳುವುದು. ಚಟ್ನಿ, ಸಲಾಡ್ ಮತ್ತು ಇತರ ಖಾದ್ಯಗಳಲ್ಲಿ ಬೆಳ್ಳುಳ್ಳಿ ಬಳಸಬಹುದು. ಬೆಳ್ಳುಳ್ಳಿಯನ್ನು ತಲೆಬುರುಡೆಗೆ ಹೊರಗಿನಿಂದ ಹಚ್ಚಿಕೊಳ್ಳಬಹುದು.
ನಾಲ್ಕು ಎಸಲು ಬೆಳ್ಳುಳ್ಳಿ ಸಿಪ್ಪೆ ತೆಗೆಯಿರಿ.
ಇದನ್ನು ಜಜ್ಜಿಕೊಂಡು ಐದು ನಿಮಿಷ ಕಾಲ ಹಾಗೆ ಬಿಡಿ.
ಅರ್ಧ ಕಪ್ ತೆಂಗಿನೆಣ್ಣೆ ಜತೆಗೆ ಇದನ್ನು ಬಿಸಿ ಮಾಡಿ.
ಬೆಳ್ಳುಳ್ಳಿ ಎಸಲನ್ನು ತೆಗೆದು, ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿ.
ಕಿವಿ ನೋವಿಗೆ ಬೆಳ್ಳುಳ್ಳಿ: ಕಿವಿನೋವು ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆಯಾಗಿದೆ. ಕಿರಿಕಿರಿ ಉಂಟು ಮಾಡುವ ಗಂಟಲು ಮತ್ತು ಬಂದ್ ಆಗಿರುವಂತಹ ಕಿವಿಗಳು ಚಳಿಗಾಲದಲ್ಲಿ ಸಾಮಾನ್ಯ. ಎರಡು ಎಸಲು ಬೆಳ್ಳುಳ್ಳಿ ಜಜ್ಜಿಕೊಂಡು ಅದನ್ನು ಕೆಲವು ನಿಮಿಷ ಕಾಲ ಹಾಗೆ ಬಿಡಿ. ಒಂದು ಹತ್ತಿಯಲ್ಲಿ ಈ ಬೆಳ್ಳುಳ್ಳಿ ಸುತ್ತಿಕೊಂಡು ಕಿವಿಯ ಒಳಗಡೆ ಹಾಕಿ. ಇದನ್ನು ಆಳಕ್ಕೆ ತಳ್ಳಬೇಡಿ.
ಶೀತ ಹಾಗೂ ಕೆಮ್ಮಿಗೆ ಬೆಳ್ಳುಳ್ಳಿ: ಎರಡು ಎಸಲು ಬೆಳ್ಳುಳ್ಳಿ ಜಜ್ಜಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. ಎರಡು ಚಮಚ ಜೇನುತುಪ್ಪ ಮತ್ತು ಚಿಟಿಕೆ ಕಲ್ಲುಪ್ಪಿನ ಜತೆಗೆ ಇದನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ನಾಲಿಗೆ ಮೇಲೆ ಇಟ್ಟುಕೊಂಡು ನಿಧಾನವಾಗಿ ಗಂಟಲಿನ ಮೂಲಕ ಒಳಗೆ ಹೋಗಲಿ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದರೆ ಅಸಿಡಿಟಿ ಹೆಚ್ಚಾಗಬಹುದು. ಚಳಿಗಾಲದಲ್ಲಿ ಬಿಸಿಯಾದ ಸೂಪ್ ಗೆ ಬೆಳ್ಳುಳ್ಳಿ ಸೇರಿಸಿ ಸೇವಿಸಿದರೆ ಒಳ್ಳೆಯದು. ಬೆಳ್ಳುಳ್ಳಿಯು ವೈರಲ್ ವಿರೋಧಿ ಗುಣಗಳನ್ನು ಹೊಂದಿರುವ ಕಾರಣ ಶೀತ ಮತ್ತು ಕೆಮ್ಮು ನಿವಾರಣೆಯಾಗುವುದು.
ಗಂಟುನೋವಿಗೆ ಎಣ್ಣೆ: ಮೂರು ಎಸಲು ಬೆಳ್ಳುಳ್ಳಿ ಜಜ್ಜಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. ಹತ್ತು ಮಿ.ಲೀ. ಎಳ್ಳೆಣ್ಣೆಯೊಂದಿಗೆ ಇದನ್ನು ಬಿಸಿ ಮಾಡಿ. ನೋವಿರುವಂತಹ ಗಂಟುಗಳಿಗೆ ಈ ಎಣ್ಣೆಯಿಂದ ಮಸಾಜ್ ಮಾಡಿ. ಚರ್ಮವು ಸೂಕ್ಷ್ಮವಾಗಿದ್ದರೆ ಇದನ್ನು ಬಳಸಬೇಡಿ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಕೆಲವು ವೈಜ್ಞಾನಿಕ ಸಮೀಕ್ಷೆಗಳ ಮೂಲಕ ನಿಯಮಿತವಾಗಿ ಬೆಳ್ಳುಳ್ಳಿ ಸೇವಿಸಿದ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದು ಕಂಡುಬಂದಿದೆ. ವಿಶೇಷವಾಗಿ ಶೀತ ಮತ್ತು ಇದರ ಇತರ ಪರಿಣಾಮಗಳನ್ನು ಕಡಿಮೆಗೊಳಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಚೈತನ್ಯ ಹೆಚ್ಚಿಸಲು ನೆರವಾಗುತ್ತವೆ. ಇದೇ ಕಾರಣಕ್ಕೆ ಸತತವಾಗಿ ಶೀತ ಕೆಮ್ಮು ಜ್ವರ ಎಂದು ನಿತ್ಯವೂ ಕಾಯಿಲೆ ಬೀಳುವ ವ್ಯಕ್ತಿಗಳಿಗೆ ಊಟದಲ್ಲಿ ಬೆಳ್ಳುಳ್ಳಿ ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.
ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ: ಬೆಳ್ಳುಳ್ಳಿಯಲ್ಲಿ ಪಾಲಿ ಸಲ್ಫೈಡ್ ಎಂಬ ಪೋಷಕಾಂಶವಿದೆ. ನಮ್ಮ ರಕ್ತದ ಕೆಂಪು ರಕ್ತಕಣಗಳು ಈ ಪೋಷಕಾಂಶಗಳನ್ನು ಹೈಡ್ರೋಜನ್ ಸಲ್ಫೈಡ್ ಆಗಿ ಪರಿವರ್ತಿಸುತ್ತವೆ. ಇದು ನರಗಳು ಪೆಡಸಾಗಿದ್ದರೆ ಸಡಿಲಗೊಳಿಸಲು ನೆರವಾಗುತ್ತವೆ. ಪರಿಣಾಮವಾಗಿ ಹೃದಯಕ್ಕೆ ಕಡಿಮೆ ಒತ್ತಡದಲ್ಲಿ ರಕ್ತವನ್ನು ದೂಡಿಕೊಟ್ಟರೆ ಸಾಕಾಗುತ್ತದೆ. ಇದು ಅಧಿಕ ರಕ್ತದ ಒತ್ತಡದ ಸಮಸ್ಯೆ ಇರುವ ವ್ಯಕ್ತಿಗಳಿಗೆ ಒಂದು ವರದಾನವಾಗಿದೆ.