ಅಡುಗೆಮನೆಯ ಆಪ್ತ ಮಣ್ಣಿನ ಒಲೆ

ಕಲಬುರಗಿ ಜು 30: ನಮ್ಮ ಅಡುಗೆ ಮನೆಗಳಲ್ಲಿ ಸಾಕಷ್ಟು ಕ್ರಾಂತಿಕಾರಿ ಬದಲಾವಣೆಗಳಾಗಿವೆ. ಆದರೆ ಅವೆಲ್ಲ ಉಳ್ಳವರಿಗೆ ಮಾತ್ರ. ಅಡುಗೆ ತಯಾರಿಸಲು ಇಂದಿಗೂ ಬಡವರ ಪಾಲಿಗೆ ಮಣ್ಣಿನ ಒಲೆಗಳೇ ಆಸರೆ. ಹೀಗಾಗಿ ಅಚ್ಚು ಕಟ್ಟಾದ ಒಲೆಗಳಿಗೆ ಇಂದಿಗೂ ಬೇಡಿಕೆ.
ಈ ಒಲೆಗಳನ್ನು ಸಂಪೂರ್ಣವಾಗಿ ಮಣ್ಣಿನಿಂದ ತಯಾರಿಸುತ್ತಾರೆ. ಇದರ ತಯಾರಿಕೆಯೇ ಕುಲ ಕಸುಬಾದ ಕುಂಬಾರರ ಹಲವಾರು ಕುಟುಂಬದವರು ನಮ್ಮ ಮಧ್ಯೆ ಇದ್ದಾರೆ. ಒಲೆ ತಯಾರಿಸಲು ಮೊದಲು ಮಣ್ಣನ್ನು ಹರಳು ಕಲ್ಲುಗಳು ಇಲ್ಲದಂತೆ ಸೋಸಿ ತೆಗೆಯುತ್ತಾರೆ. ಹೀಗೆ ತಯಾರಾದ ಮಣ್ಣಿಗೆ ನೀರು,ಅರಳೆ, ಸ್ವಲ್ಪ ಪ್ರಮಾಣದ ಬೆಲ್ಲ ಹಾಕಿ ನಾಲ್ಕೈದು ದಿನಗಳ ಕಾಲ ನೆನೆ ಹಾಕುತ್ತಾರೆ. ನಂತರ ಅದನ್ನು ಕುಟ್ಟಿ ಮತ್ತೆ ನೆನಸಿ ಆಮೇಲೆ ಒಲೆಗಳನ್ನು ತಯಾರಿಸಿ ಬೆಂಕಿಯಲ್ಲಿ ಸುಟ್ಟು ಸಿದ್ಧ ಪಡಿಸುತ್ತಾರೆ. ಇದೆಲ್ಲ ಕೇವಲ ಕೈಯಿಂದ ನಡೆಯುವ ಕೆಲಸ.
ಗ್ರಾಮೀಣ ಜನತೆ ಇಂದಿಗೂ ತಮ್ಮ ಮನೆಗಳಲ್ಲಿ ಹಬ್ಬ ಹರಿದಿನಗಳಲ್ಲಿ ಕೆಲವೊಂದು ಕಡೆ ದಿನಾಲೂ ಒಲೆಯನ್ನು ಪೂಜೆ ಮಾಡುವರು. ರೈತರು ತಮ್ಮ ಹೊಲ ಗದ್ದೆಗಳಲ್ಲಿ ಬೆಳೆಗಳನ್ನು ಕಟಾವು ಮಾಡಿದ ನಂತರ ಅದನ್ನೇ ಉರುವಲಾಗಿ ಬಳಸುತ್ತಾರೆ. ಹಾಗಾಗಿ ಈ ಮಣ್ಣಿನ ಒಲೆಗಳು ಅಡುಗೆ ಮಾಡಲು ಹೆಚ್ಚು ಸಹಕಾರಿ. ಇವುಗಳ ವಿನ್ಯಾಸದಲ್ಲಿ ಕುಂಬಾರರು ಹೆಚ್ಚಿನ ಜಾಗೃತಿ ವಹಿಸಿ ಒಂದು ದೊಡ್ಡ ಒಲೆ ಅದರ ಹಿಂದೆ ಎರಡು ಸಣ್ಣ ಒಲೆಗಳನ್ನು ನಿರ್ಮಿಸಿರುತ್ತಾರೆ. ದೊಡ್ಡ ಒಲೆಗೆ ಮುಖ್ಯ ಆಹಾರ, ಸಣ್ಣ ಒಲೆಗೆ ಸಣ್ಣ ಪುಟ್ಟ ಆಹಾರ ತಯಾರಿಸಲಾಗುತ್ತದೆ. ಒಂದೇ ಒಲೆಯ ಬೆಂಕಿ ಮೂರಕ್ಕೂ ಸಾಕಾಗುತ್ತದೆ.
ಅಧುನಿಕತೆಯ ಭರಾಟೆಯಲ್ಲಿ ಮಣ್ಣೊಲೆ ಬೆಲೆ ಕಳೆದುಕೊಂಡಿಲ್ಲ ಎನ್ನುವದೇ ಸಮಾಧಾನಕರ ಸಂಗತಿ. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಇದನ್ನೇ ನಂಬಿಕೊಂಡಿದ್ದಾರೆ.ಉಜ್ವಲ ಯೋಜನೆಯಡಿ ಬಹುತೇಕ ಬಡವರ ಮನೆಗಳಲ್ಲಿ ಗ್ಯಾಸ ಸಿಲೆಂಡರ್ ಇದ್ದರೂ ದಿನಂಪ್ರತಿ ರೊಟ್ಟಿ ಬೇಯಿಸಲಿಕ್ಕಾದರೂ ಮಣ್ಣಿನ ಒಲೆ ಇಟ್ಟುಕೊಂಡಿರುತ್ತಾರೆ. ಮಣ್ಣಿನ ಒಲೆಯ ಮೇಲೆ ಮಾಡಿದ ರೊಟ್ಟಿ ಅತ್ಯಂತ ರುಚಿಕರ ಎಂಬುವದು ಬಹುಜನರ ಅನಿಸಿಕೆ.
ಗುರುರಾಜ.ಪಟ್ಟಣಶೆಟ್ಟಿ