ಅಡುಗೆಮನೆಯಿಂದ ಮಾಯವಾದ ನೆಲುವು

ಕಲಬುರಗಿ,ಏ.3: ಪಾತ್ರೆಗಳನ್ನು ಇಡುವದಕ್ಕೆ ಎತ್ತರದ ಗೂಟ ಅಥವಾ ತೊಲೆಯಿಂದ ಇಳಿಬಿಡುವ ಹಗ್ಗದ ಜಾಳಿಗೆಯೇ ನೆಲುವು.
ಇದು ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಅಡುಗೆ ಮನೆಯಲ್ಲಿ ಉಪಯೋಗಿಸುವ ಸರಳ ಸಾಧನ. ಇಚಲು ಎಲೆಯಿಂದ ಅಥವಾ ಹಗ್ಗದಿಂದ ಇದನ್ನು ತಯಾರಿಸುತ್ತಾರೆ.ಈಚಲು ಮರದ ಎಲೆಯಿಂದ ಮಾಡಿದ ಹಗ್ಗದಿಂದ ನೆಲುವು ತಯಾರಿಸಿ ಮನೆ ಮನೆಗೆ ಮಾರಲು ಬರುತ್ತಿದ್ದರು.
ಇದರಲ್ಲಿ ಗ್ರಾಮೀಣ ಮಹಿಳೆಯರು ಹಾಲು, ಮೊಸರು ಮತ್ತು ಪಲ್ಯ,ರೊಟ್ಟಿ ಬುಟ್ಟಿ ಇಡುತ್ತಿದ್ದರು. ಬೆಕ್ಕು ನಾಯಿ ಇಲಿಗಳ ಉಪಟಳದಿಂದ ರಕ್ಷಿಸಿಕೊಳ್ಳಲು ಇದನ್ನು ಉಪಯೋಗಿಸಲಾಗುತ್ತಿತ್ತು.
ಇದು ಎತ್ತರಕ್ಕೆ ಇರುವುದರಿಂದ ಸಾಕಷ್ಟು ಗಾಳಿ ಬೆಳಕು ಬರುತ್ತಿರುವುದರಿಂದ ಇಲ್ಲಿ ಇಟ್ಟ ಪದಾರ್ಥ ಕೆಡುತ್ತಿರಲಿಲ್ಲ. ಈಗ ಅಧುನಿಕ ಭರಾಟೆಯಲ್ಲಿ ಎಲ್ಲವೂ ಕಣ್ಮರೆಯಾಗಿ ಆ ಜಾಗಕ್ಕೆ ಫ್ರಿಜ್ ಆವರಿಸಿವೆ.
ಆದರೆ ಈಗಲೂ ಗ್ರಾಮೀಣಭಾಗದಲ್ಲಿ ಅಲ್ಲಲ್ಲಿ ನೆಲುವು ಕಾಣಸಿಗುತ್ತದೆ.