ಅಡಿಕೆ ವ್ಯಾಪಾರಿಗೆ ಇರಿದು ದರೋಡೆ: ಮೂವರ ಸೆರೆ

ಉಪ್ಪಿನಂಗಡಿ, ನ.೧೦- ಚೂರಿಯಿಂದ ಇರಿದು ಅಡಿಕೆ ವ್ಯಾಪಾರಿಯನ್ನು ದರೋಡೆ ನಡೆಸಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದು, ಪರಾರಿಯಾಗಿರುವ ಈ ತಂಡದ ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಕೋಟೆಕನಿ ಮಿತ್ತಪದವಿನ ಅಫ್ರೀದ್ (22), ಸೋಮವಾರ ಪೇಟೆ ತಾಲೂಕಿನ ದೊಡ್ಡಹನಕೊಡು ಗ್ರಾಮದ ಕಾಗಡಿಕಟ್ಟೆ ನಿವಾಸಿ ಜುರೈಝ್ (20) ಮತ್ತು ಮೂಲತಃ ಬಂಟ್ವಾಳ ತಾಲೂಕಿನ ಬಡಗಬೆಲ್ಲೂರು ಗ್ರಾಮದ ಶಾಲೆ ಬಳಿ ನಿವಾಸಿ, ಹಾಲಿ  ಕಡೆಶಿವಾಲಯ ದೊಡ್ಡಾಜೆಯಲ್ಲಿ ವಾಸವಿರುವ  ಮೊಹಮ್ಮದ್ ತಂಝೀಲ್ (22) ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ಚೂರಿ, ಮೂರು ಮೊಬೈಲ್ ಹಾಗೂ ಸುಲಿಗೆ ಮಾಡಿದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಟ್ವಾಳ ತಾಲೂಕಿನ ಪೆರ್ನೆಯ ಆಶೀರ್ವಾದ ಕಟ್ಟಡದಲ್ಲಿ ಅಡಿಕೆ ಖರೀದಿ ಅಂಗಡಿ ನಡೆಸುತ್ತಿದ್ದ ದೀಪಕ್ ಜಿ. ಶೆಟ್ಟಿಯವರು ಅ.27 ರಂದು ಸಂಜೆ ಅಂಗಡಿಗೆ ಬಾಗಿಲು ಹಾಕಿ ಅಡಿಕೆ ಮಾರಾಟ ಮಾಡಿದ ಮೂರುವರೆ ಲಕ್ಷ ನಗದಿನೊಂದಿಗೆ ಪದೆಬರಿಯ ತನ್ನ ಮನೆಗೆ ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಆ್ಯಕ್ಟೀವಾದಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದ  ತಂಡ ಬಿಳಿಯೂರಿನ ಪೆಜಕುಡೆ (ಪಜೆಕೋಡಿ) ಎಂಬಲ್ಲಿ ದೀಪಕ್ ಅವರನ್ನು ಅಡ್ಡಗಟ್ಟಿ ಅವರಿಗೆ ಚೂರಿಯಿಂದ ಇರಿದು, ಅವರಲ್ಲಿದ್ದ ಮೂರುವರೆ ಲಕ್ಷ ನಗದು, ಚಿನ್ನದ ಸರ ಹಾಗೂ  ಮೊಬೈಲ್  ದರೋಡೆ ನಡೆಸಿ ಪರಾರಿಯಾಗಿದ್ದರು. ಗಂಭೀರ ಗಾಯಗೊಂಡಿದ್ದ ದೀಪಕ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಇದೀಗ ದರೋಡೆಕೋರರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.