ಅಡರಕಟ್ಟಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ


ಲಕ್ಷ್ಮೇಶ್ವರ,ಮಾ.19:ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ತಾಲೂಕಿನ ಅಡರಕಟ್ಟಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ ಪ್ಯಾಟಿ ಅವರು ಸರಕಾರದ ಅತ್ಯಂತ ಮಹತ್ವ ಆಕಾಂಕ್ಷಿ ಕಾರ್ಯಕ್ರಮವು ಗ್ರಾಮೀಣ ಪ್ರದೇಶದ ಜನರ ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ತಾಲೂಕ ಮಟ್ಟದ ಅಧಿಕಾರಿಗಳಿಂದ ಬಗೆ ಹರಿಸಿ ಸಮಸ್ಯೆ ಪರಿಹಾರ ಕಂಡುಕೊಳ್ಳುವದು ಆಗಿದ್ದು, ಸರಕರಿದ ಕಚೇರಿಗೆ ಎಡತಾಕಿ ಜನರು ಅಧಿಕಾರಿಗಳು ಲಭ್ಯವಾಗದೇ ಇರುವದರಿಂದ ತೊಂದರೆ ಅನುಭವಿಸುತ್ತಿದ್ದರು ಇದನ್ನು ಮನಗಂಡ ರಾಜ್ಯ ಸರಕಾರ ಜನರ ಮನೆಯ ಬಾಗಲಿಗೆ ಆಡಳಿತ ಯಂತ್ರವನ್ನು ತಲುಪಿಸಿ ಪರಿಹಾರಕ್ಕಾಗಿ ಕೈಗೊಂಡ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆ ವಿದ್ಯಾರ್ಥಿಗಳು ತಮಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಬಾಟಲಿಗಳಲ್ಲಿ ಮನೆಯಿಂದ ನೀರು ತುಂಬಿಕೊಂಡು ಬಂದರೆ ಆ ನೀರು ಸಾಲದಂತಾಗುತ್ತಿದ್ದು, ಎಲ್ಲೆಂದರಲ್ಲಿ ಅಡ್ಡಾಡಿ ನೀರು ಕೇಳುವ ಪರಿಸ್ಥಿತಿ ಉಂಟಾಗಿದೆ ಆದ್ದರಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ತಹಶೀಲ್ದಾರ್ ಆನಂದ ಶೀಲ್ ಅವರಿಗೆ ಮನವಿ ಮಾಡಿದರು.
ಆಗ ಗ್ರಾಮ ಪಂಚಾಯಿತಿ ಅಧ್ಯಕ್ಷರು ಯಾವುದಾದರೂ ಯೋಜನೆಯಲ್ಲಿ ಶಾಲಾ ಆವರಣದಲ್ಲಿಯೇ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ ನಾಯಕ ಅವರು ಹರದಗಟ್ಟಿ ಹಾಗೂ ಆಡರಕಟ್ಟಿ ತಾಂಡಾದ ಜನರು ಸುಮಾರು 50 ರಿಂದ 60 ವರ್ಷಗಳಿಂದ ಮಾಲ್ಕೀ ಜಮೀನುಗಳಲ್ಲಿ ವಾಸವಾಗಿದ್ದು, ಅವರಿಗೆ ಗ್ರಾಮ ಪಂಚಾಯಿತಿಗೆ ಇ- ಸ್ವತ್ತು ಉತಾರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು.
ಆಗ ತಹಶೀಲ್ದಾರ್ ಅವರು ಎಸ್ಟು ಪ್ರದೇಶದಲ್ಲಿ ಮನೆಗಳು ನಿರ್ಮಾಣವಾಗಿದೆ ಆ ಪ್ರದೇಶವನ್ನು ಮಾಲೀಕರು ಬಿನ್ ಶೇತ್ಕಿ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದರು.
ಸಭೆಯಲ್ಲಿ ವಿವಿಧ ಇಲಾಖೆಗೆ ಹಾಗೂ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ 10 ಅರ್ಜಿಗಳು ಬಂದಿದ್ದವು ಅವುಗಳನ್ನು ಸಂಬಂಧ ಪಟ್ಟ ಇಲಾಖೆಗೆ ವಿಲೇವಾರಿ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿ ಅಧಿಕಾರಿ ಸವಿತಾ ಹುನಗುಂದ, ಗ್ರಾ.ಪಂ ಉಪಾಧ್ಯಕ್ಷೆ ಪವಿತ್ರ ಗಡೆಪ್ಪನವರ, ಪಿಡಿಓ ಸವಿತಾ ಸೋಮಣ್ಣವರ, ಚಂದ್ರು ನರಸಮ್ಮನವರ, ಎಂ.ಎಂ.ಹವಳದ, ಹಜೇರೆಸಾಬ ಅರಳಿಹಳ್ಳಿ, ಗ್ರಾಮ ಆಡಳಿತಾಧಿಕಾರಿ ಗುರುರಾಜ ಹವಳದ, ಬಿ.ಎಂ.ಯರಗುಪ್ಪಿ ಗ್ರಾಮಸ್ಥರಾದ ಮುದಿಯಪ್ಪ ಹವಳದ, ರಾಮಣ್ಣ ಚಿಕ್ಕನವರ್, ಎಂ.ಆರ್.ಹವಳದ, ಜಯಶ್ರೀ ಭಂಗಿ, ಮುಖ್ಯೋಪಾಧ್ಯಾಯ ಎಸ್. ಎಚ್.ಉಮಚಗಿ ಸೇರಿದಂತೆ ಗ್ರಾ.ಪಂ ಸದಸ್ಯ ಸದಸ್ಯರು ಇದ್ದರು.
ಕುಮಾರ ಚಕ್ರಸಾಲಿ ಎಂ.ಬಿ.ಹವಳದ ನಿರ್ವಹಿಸಿದರು.