ಅಡತಿ ಮಾಲೀಕನ ಅಪಹರಣ: 24 ಗಂಟೆಯಲ್ಲೇ ಆರೋಪಿಗಳ ಬಂಧನ​

ಕಲಬುರಗಿ,ನ.15-ಹಣಕ್ಕಾಗಿ ಅಡತಿ ಮಾಲೀಕನನ್ನು ಅಪಹರಿಸಿದ್ದ ಆರೋಪಿಗಳನ್ನು ಕೇವಲ 24 ಗಂಟೆಯಲ್ಲಿ ಬಂಧಿಸುವಲ್ಲಿ ಇಲ್ಲಿನ ಚೌಕ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಪಿಎಂಸಿ ನೆಹರು ಗಂಜ್ ಪ್ರದೇಶದಲ್ಲಿನ ಅಡತಿ (ಖರೀದಿ ಕೇಂದ್ರ) ಮಾಲೀಕ ಹನುಮಂತರಾಯ ಮಾಲಿಪಾಟೀಲ ಎಂಬುವರನ್ನು ಆರೋಪಿಗಳು ಹಣದ ವಿಚಾರವಾಗಿ ಥಳಿಸಿದರಲ್ಲದೆ, ನ. 13ರಂದು ಅಪಹರಿಸಿಕೊಂಡು ಹೋಗಿದ್ದರು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಕೇವಲ 24 ಗಂಟೆಯೊಳಗೆ ಬಾಗಲಕೋಟೆಯಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಖಾಜಾಹುಸೇನ್, ಸಿರಾಜುದ್ದೀನ್, ಮಹಮ್ಮದ್ ಯೂನಸ್, ಮೊಹಮ್ಮದ್ ಜಾವಿದ್, ಎಂ ಡಿ ಅಫೀಸ್ ಬಂಧಿತರು. ಆರೋಪಿಗಳೆಲ್ಲರೂ ಜೇವರ್ಗಿ ಮೂಲದವರಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಳ್ಳಲಾಗಿದೆ ಹಾಗೂ ಅಪಹರಣಕ್ಕೊಳಗಾಗಿದ್ದ ಅಡತಿ ಮಾಲೀಕ ಹನುಮಂತರಾಯ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್ ಸತೀಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..