ಅಟ್ಟೂರ್ ಸಾಮಾಜಿಕ ಕಳಕಳಿ, ಸೇವೆ ಮಾದರಿ :ಎಚ್.ಬಿ.ಪಾಟೀಲ

ಕಲಬುರಗಿ :ಜು.31: ವೃತ್ತಿಯಲ್ಲಿ ನ್ಯಾಯವಾದಿಯಾಗಿ, ಪ್ರವೃತ್ತಿಯಲ್ಲಿ ಸಾಮಾಜಿಕ ಸೇವಕ, ಹೋರಾಟಗಾರ, ಸಂಘಟಕರಾಗಿ ವಿವಿಧ ಮುಖಗಳಿಂದ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುವ ಮೂಲಕ ಹಣಮಂತರಾಯ ಎಸ್.ಅಟ್ಟೂರ್ ಅವರ ಸಾಮಾಜಿಕ ಕಳಕಳಿ, ಸೇವೆ ಮಾದರಿಯಾಗಿದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಹಳೆ ಆರ್.ಟಿ.ಓ ಕಚೇರಿ ಸಮೀಪವಿರುವ ವಿಜಯಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ‘ಸಹೃದಯಿ ಗೆಳೆಯರ ಬಳಗ’ ಭಾನುವಾರ ಏರ್ಪಡಿಸಿದ್ದ ‘ಅಟ್ಟೂರ್ ಶರೀರಕ್ಕೆ 50, ಸಮಾಜ ಸೇವೆಗೆ 25 ವರ್ಷ’ ಎಂಬ ಅಂಶಧಾರಿತ ‘ದಣಿವರಿಯದ ಹೋರಾಟಗಾರ’ ಎಂಬ ಅಭಿನಂದನಾ ಗ್ರಂಥ ಬಿಡುಗಡೆಯ ಸಮಾರಂಭದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಅಟ್ಟೂರ್ ದಂಪತಿಗೆ ಸತ್ಕರಿಸಿ, ಅವರು ಮಾತನಾಡಿದರು.
ಬಳಗದ ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಅಟ್ಟೂರ್ ಅವರು ವಿದ್ಯರ್ಥಿ ದೆಸೆಯಿಂದಲೇ ಸಮಾಜ ಸೇವೆಯ ಗುಣ ಮೂಗೂಡಿವೆ. ರೈತರು, ಕಾರ್ಮಿಕರು, ಬಡವರು, ಸಮಾಜದಲ್ಲಿರುವ ಅಸಹಾಯಕರಿರ ಸೇವೆ ಮಾಡುತ್ತಿದ್ದಾರೆ. ನಮ್ಮ ಬಳಗದ ಕಾನೂನು ಸಲಹೆಗಾರರಾಗಿ ಬಳಗದ ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸಿದರು.
ವೀರೇಶ ಬೋಳಶೆಟ್ಟಿ ನರೋಣಾ, ಸಿದ್ದರಾಮ ತಳವಾರ, ಮಲ್ಲಿನಾಥ ಮುನ್ನಳ್ಳಿ, ಶ್ರೀನಿವಾಸ ಬುಜ್ಜಿ, ಸಂತೋಷ ಹೂಗಾರ, ಬಸವರಾಜ ಹೂಗಾರ ಸೇರಿದಂತೆ ಇನ್ನಿತರರು ಇದ್ದರು.