ಅಟೆಂ‌ಡರ್, ಸ್ಕ್ಯಾವೆಂಜಱ್ಸ್ ಗೆ ನೀಡುವ ಕನಿಷ್ಠ ವೇತನ ಖಾತ್ರಿಗೆ ಆಗ್ರಹ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.19: ವಿಮ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಟೆಂ‌ಡರ್, ಸ್ಕ್ಯಾವೆಂಜಱ್ಸ್ ಗೆ ನೀಡುವ ಕನಿಷ್ಠ ವೇತನ ಖಾತ್ರಿ ಹಾಗೂ ಇತರೆ ಬೇಡಿಕೆಗಳಿಗೆ ಆಗ್ರಹಿಸಿ ವಿಮ್ಸ್ ಗುತ್ತಿಗೆ ನೌಕರರ ಸಂಘ(ರಿ)ದಿಂದ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಮೊದಲು ಸಾಕಷ್ಟು  ಬಾರಿ ಹೊರಗುತ್ತಿಗೆಯಲ್ಲಿರುವ ಡಿ ಗ್ರೂಪ್ ಕಾರ್ಮಿಕರ ಹಲವಾರು ಸಮಸ್ಯೆಗಳ ಬಗ್ಗೆ ವಿಮ್ಸ್ ಆಡಳಿತದ ಗಮನಕ್ಕೆ ತರಲಾಗಿದೆ. ಸಂಘದ ವತಿಯಿಂದ ಈ ಹಿಂದೆ ಮೂರು ದಿನಗಳ ಮುಷ್ಕರವೂ ನಡೆಸಲಾಗಿತ್ತು. ಕೆಲವು ಬೇಡಿಕೆಗಳು ಈಡೇರಿದರೂ, ಸಾಕಷ್ಟು ಸಮಸ್ಯೆಗಳಿಗೆ ಇನ್ನೂವರೆಗೂ ಪರಿಹಾರ ದೊರೆತಿಲ್ಲ. ಅಗತ್ಯಾನುಸಾರ ಸ್ಕ್ಯಾವೆಂಜರ್ಸ್ ಸಂಖ್ಯೆ ಹೆಚ್ಚಿಸಬೇಕೆಂಬ ಬೇಡಿಕೆ ಇನ್ನೂವರೆಗೂ ಮನ್ನಣೆ ಸಿಕ್ಕಿಲ್ಲ. ವಿಮ್ಸ್ ಸಂಸ್ಥೆಯಲ್ಲಿ 250—300 ಕಾರ್ಮಿಕರು ಸ್ಕ್ಯಾವೆಂಜರ್ಸ್ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಆದರೆ ಸ್ಕ್ಯಾವೆಂಜರ್ಸ್ ಎಂದು ನೇಮಿಸಿರುವುದು ಕೇವಲ 80 ಕಾರ್ಮಿಕರನ್ನು ಮಾತ್ರ. ಈ ಹಿಂದೆ 180 ಕಾರ್ಮಿಕರನ್ನು ಸ್ಕ್ಯಾವೆಂಜರ್ಸ್ ಆಗಿ ನೇಮಿಸಲಾಗಿತ್ತು. ಅದನ್ನ ಏಕಾಏಕಿ 80ಕ್ಕೆ ಇಳಿಸಲಾಗಿದೆ. ಹಾಗಾಗಿ ಸಾಕಷ್ಟು ಸಂಖ್ಯೆಯ ಹೊರ ಗುತ್ತಿಗೆ ಕಾರ್ಮಿಕರಿಗೆ ಕಡಿಮೆ ವೇತನ ನೀಡಿ ಸ್ಕ್ಯಾವೆಂಜರ್ಸ್ ಕೆಲಸಗಳನ್ನ ಮಾಡಿಸಲಾಗುತ್ತಿದೆ. ಇದು ಘೋರ ಅನ್ಯಾಯ. ಇದನ್ನ ಪ್ರಶ್ನಿಸಿದರೆ, ಉನ್ನತ ಅಧಿಕಾರಿಗಳ ಆದೇಶದಂತೆ ಕ್ರಮಕೈಗೊಂಡಿದ್ದೇವೆ ಎಂಬ ಉತ್ತರ ದೊರೆಯುತ್ತದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದಶಿಗಳಿಗೂ ಈ ಕುರಿತು ಮನವಿ ಪತ್ರ ಸಲ್ಲಿಸಲಾಗಿದೆ. ಆದರೂ ಇದಕ್ಕೆ ಸೂಕ್ತ ಪರಿಹಾರ ದೊರೆತಿಲ್ಲ.
ಇದಲ್ಲದೆ ಈಗಾಗಲೆ ಸ್ಕ್ಯಾವೆಂಜರ್ಸ್ ಹಾಗೂ ಅಟೆಂಡರ್ ಆಗಿ ದುಡಿಯುತ್ತಿರುವ ಕಾರ್ಮಿಕರಿಗೆ ಅವರ ದುಡಿಮೆಗೆ ತಕ್ಕ ಕನಿಷ್ಟ ವೇತನ ಖಾತರಿಯಾಗುತ್ತಿಲ್ಲ. ಇದರಿಂದಾಗಿ ಹಲವಾರು ಕಾರ್ಮಿಕರಿಗೆ ಪ್ರತಿ ತಿಂಗಳ ಸಾವಿರಾರು ರೂಪಾಯಿ ನಷ್ಟವಾಗುತ್ತಿದೆ. ವಿಮ್ಸ್ ಆಡಳಿತ ಹಾಗೂ ಗುತ್ತಿಗೆದಾರರಿಗೆ ಈ ಸಮಸ್ಯೆಗಳ ಬಗ್ಗೆ ಸಾಕಷ್ಟು ಬಾರಿ ತಿಳಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ.  ಈ ಹಿನ್ನಲೆಯಲ್ಲಿ ವಿಮ್ಸ್ ಹೊರಗುತ್ತಿಗೆ ಕಾರ್ಮಿಕರ ನ್ಯಾಯುತ ಬೇಡಿಕೆಗಳನ್ನು ಈ ಕೂಡಲೆ ಈಡೇರಿಸಲು ತಾವು ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ವಿಮ್ಸ್ ಗುತ್ತಿಗೆ ನೌಕರರ ಸಂಘದ ಕಾರ್ಯದರ್ಶಿ ಎ.ದೇವದಾಸ್, ಮತ್ತಿತರರು ಇದ್ದರು.