ಅಟಲ್ ಪುಣ್ಯತಿಥಿ: ಮುರ್ಮು, ಮೋದಿ ಶ್ರದ್ಧಾಂಜಲಿ

ನವದೆಹಲಿ,ಆ.೧೬-ದೇಶ ಕಂಡ ಅಪರೂಪದ ರಾಜಕಾರಣಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ರಾಷ್ಟ್ರಪತಿ ಮುರ್ಮು, ಉಪರಾಷ್ಟ್ರಪತಿ ಧನ್ಕ್‌ರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಮಂದಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಲೋಕಸಭಾಧ್ಯಕ್ಷ ಓಂ ಬಿರ್ಲಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸೇರಿದಂತೆ ಅನೇಕ ಸಚಿವರು, ಬಿಜೆಪಿ ನಾಯಕರು ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿ ಸ್ಥಳ ‘ಸದೈವ್ ಅಟಲ್’ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಸಿದರು.
ಗೃಹ ಸಚಿವ ಅಮಿತ್ ಶಾ ಕೂಡ ಮಾಜಿ ಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ನಾಯಕನನ್ನು ನೆನಪಿಸಿಕೊಂಡಿದ್ದಾರೆ.
ಬಿಜೆಪಿಯ ಮೊದಲ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ಎ.ಬಿ. ವಾಜಪೇಯಿ ಪಾತ್ರರಾಗಿದ್ದಾರೆ. ಪಕ್ಷವನ್ನು ಅದರ ತಳಹದಿಯನ್ನು ಮೀರಿ ಜನಪ್ರಿಯಗೊಳಿಸಿದರು ಆರು ವರ್ಷಗಳ ಕಾಲ ಸಮ್ಮಿಶ್ರ ಸರ್ಕಾರವನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿಗೆ ಪಾತ್ರರಾಗಿದ್ದರು.
ಅಟಲ್ ಬಿಹಾರಿ ವಾಜಪೇಯಿ ಅವರು ಬಿಜೆಪಿಯ ಸಹ ಸಂಸ್ಥಾಪಕರಲ್ಲಿ ಒಬ್ಬರು. ೨೦೧೮ ರಲ್ಲಿ ತಮ್ಮ ೯೩ ನೇ ವಯಸ್ಸಿನಲ್ಲಿ ನಿಧನರಾದರು. ವಾಜಪೇಯಿ ಅವರು ಮೂರು ಬಾರಿ ಪ್ರಧಾನಿಯಾಬಿ ಸೇವೆ ಸಲ್ಲಿಸಿದ್ದರು ಅದರಲ್ಲಿ ದೇಶದ ೧೦ ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ೧೯೯೬ ರಲ್ಲಿ ೧೩ ದಿನಗಳ ಅವಧಿಗೆ ಮೊದಲನೆಯದು, ನಂತರ ೧೯೯೮ ರಿಂದ ೧೯೯೯ ರವರೆಗಿನ ೧೩ ತಿಂಗಳ ಅವಧಿಗೆ. ಮೂರನೇ ಅವಧಿಯು ೧೯೯೯ ರಿಂದ ೨೦೦೪ ರವರೆಗೆ ಪೂರ್ಣಾವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.

ಅಟಲ್ ಗುಣಗಾನ:
ಅಟಲ್ ಬಿಹಾರಿ ವಾಜಪೇಯಿ ಅವರ ನಾಯಕತ್ವದಿಂದ ಭಾರತಕ್ಕೆ ಹೆಚ್ಚಿನ ಲಾಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಅಟಲ್ ಜಿ ಅವರ ಪುಣ್ಯ ತಿಥಿಯಂದು ಅವರಿಗೆ ಗೌರವ ಸಲ್ಲಿಸಲು ದೇಶದ ೧೪೦ ಕೋಟಿ ಜನರ ಪರವಾಗಿ ಗೌರವ ಸಲ್ಲಿಸುತ್ತೇನೆ. ರಾಷ್ಟ್ರದ ಪ್ರಗತಿ ಹೆಚ್ಚಿಸುವಲ್ಲಿ ಮತ್ತು ವಿವಿಧ ಕ್ಷೇತ್ರಗಳನ್ನು ೨೧ ನೇ ಶತಮಾನಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.