ಅಜ್ಜ-ಅಜ್ಜಿ ದಿನಾಚರಣೆಗೆ ಭಾರಿ ಸ್ಪಂದನೆ; ನೆನಪುಗಳ ತೆರೆದಿಟ್ಟ ಚಿತ್ರ ಪ್ರದರ್ಶನ

ಕಲಬುರಗಿ:ಜ.2: ಸ್ವಾತಂತ್ರ್ಯ ಸೇನಾನಿ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗದ ವಿಮೋಚಕ ದಿ.ಚಂದ್ರಶೇಖರ ಪಾಟೀಲ್ ಮಹಾಗಾಂವ್ ಅವರ ಸ್ಮರಣಾರ್ಥ ಹುಮನಾಬಾದ್ ಪಟ್ಟಣದ ವಿವೇಕಾನಂದ ಎಜುಕೇಷನ್ ಸೊಸೈಟಿಯ ರಾಮ್ ಅ್ಯಂಡ್ ರಾಜ್ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ ಅಜ್ಜ-ಅಜ್ಜಿಯ ದಿನಾಚರಣೆ ಸಮಾರಂಭ ಹಲವು ಆಯಾಮಗಳಲ್ಲಿ ಗಮನ ಸೆಳೆದು ಯಶಸ್ವಿಯಾಯಿತು.
ದಿ.ಚಂದ್ರಶೇಖರ ಪಾಟೀಲ್ ಮಹಾಗಾಂವ್ ಅವರ ಮೊಮ್ಮಗ ಹಾಗೂ ಹಿರಿಯ ಸಾಮಾಜಿಕ ಕಾರ್ಯಕರ್ತರಾದ ನಾಗರಾಜ್ ಮಲ್ಲಪ್ಪ ಕರ್ಪೂರ ಅವರ ಮುಂದಾಳತ್ವದಲ್ಲಿ ಹಮ್ಮಿಕೊಂಡಿದ್ದ ಈ ಸಮಾರಂಭದಲ್ಲಿ ಚಂದ್ರಶೇಖರ ಪಾಟೀಲರ ಭವ್ಯ ನೆನಪುಗಳನ್ನು ಮರುಕಳಿಸುವ 60 ಅಪರೂಪದ ಚಿತ್ರಗಳ ಪ್ರದರ್ಶನ ನಡೆಯಿತು.
ದಿ.ಚಂದ್ರಶೇಖರ ಪಾಟೀಲರ ಒಡನಾಡಿ ಹಾಗೂ ವಿವೇಕಾನಂದ ಎಜುಕೇಷನ್ ಸೊಸೈಟಿಯ ಗೌರವ ಅಧ್ಯಕ್ಷರಾಗಿರುವ ಮುತ್ಸದ್ಧಿ ಮಾಣಿಕಪ್ಪ ಗಾದಾ ಅವರ 96ನೇ ಹುಟ್ಟು ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಈ ಅಪರೂಪದ ಸಮಾರಂಭಕ್ಕೆ ಸ್ವತಃ ಗಾದಾ ಅವರು ಚಾಲನೆ ನೀಡಿದರು. ಮೇಲಾಗಿ, ಚಂದ್ರಶೇಖರ ಪಾಟೀಲರೊಂದಿಗೆ ತಾವು ಕಳೆದ ಅವಿಸ್ಮರಣೀಯ ಕ್ಷಣಗಳನ್ನು ಅವರು ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಜೊತೆಗೆ, ಇಂದು ನಾವೆಲ್ಲಾ ಸವಿಯುತ್ತಿರುವ ಸ್ವಾತಂತ್ರ್ಯದ ರಸಕ್ಷಣಗಳು ಎಂಬುದೇನಿದ್ದರೂ ಹೈದ್ರಾಬಾದ್-ಕರ್ನಾಟಕ ವಿಮೋಚನಾ ಹೋರಾಟದ ರೂವಾರಿ ಹಾಗೂ ಕಲ್ಯಾಣ ಕರ್ನಾಟಕದ ಹುಲಿ ಚಂದ್ರಶೇಖರ ಪಾಟೀಲರಂತಹ ಸಾವಿರಾರು ಸ್ವಾತಂತ್ರ್ಯ ಸೇನಾನಿಗಳ ನಿಷ್ಕಳಂಕ ಹೋರಾಟದ ಫಲ ಎಂಬುದನ್ನು ಇಂದಿನ ಯುವಪೀಳಿಗೆ ಮರೆಯದೆ, ತುಂಬಾ ಹೊಣೆಗಾರಿಕೆಯ ಪ್ರಜ್ಞೆಯೊಂದಿಗೆ ವರ್ತಿಸಬೇಕೆಂದು ಮಾಣಿಕಪ್ಪ ಗಾದಾ ಅವರು ಕಿವಿಮಾತು ಹೇಳಿದರು.
ಈ ಮಧ್ಯೆ, ರಾಮ್ ಅ್ಯಂಡ್ ರಾಜ್ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಚಿತ್ರ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಯುವಕರಿಗೆ ದಿ.ಚಂದ್ರಶೇಖರ ಪಾಟೀಲ್ ಮಹಾಗಾಂವ್ ಅವರ ಮೊಮ್ಮಗ ನಾಗರಾಜ್ ಕರ್ಪೂರ ತಮ್ಮ ತಾತನವರ ಸ್ವಾತಂತ್ರ್ಯ ಹೋರಾಟದ ಕ್ಷಣಗಳಿಗೆ ಸಾಕ್ಷಿಯಾಗಿರುವ ಚಿತ್ರಗಳ ಕುರಿತು ಮಾಹಿತಿ ಒದಗಿಸಿದರು. ಅದರಲ್ಲೂ ಬಹುಮುಖ್ಯವಾಗಿ 1947, ಆಗಸ್ಟ್ 15ರಂದು ಇಡೀ ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ್ಯೂ, ಮುಂದಿನ ಒಂದು ವರ್ಷದವರೆಗೆ ಹೈದ್ರಾಬಾದ್-ಕರ್ನಾಟಕ ಪ್ರಾಂತ ಮಾತ್ರ ಹೈದ್ರಾಬಾದ್ ನಿಜಾಮನ ಕಪಿಮುಷ್ಠಿಯಲ್ಲೇ ಇತ್ತು. ಇದರಿಂದಾಗಿ, ನಿಜಾಮನ ಹೆಸರಿನಲ್ಲಿ ರಜಾಕಾರರು ನಡೆಸುತ್ತಿದ್ದ ದಬ್ಬಾಳಿಕೆಯನ್ನು ಹತ್ತಿಕ್ಕುವಲ್ಲಿ ದಿ.ಚಂದ್ರಶೇಖರ ಪಾಟೀಲರು ತಮ್ಮ ಅನುಯಾಯಿಗಳೊಂದಿಗೆ ನಡೆಸಿದ ಹೋರಾಟವನ್ನು ಕರ್ಪೂರ ಅವರು ಮನಮುಟ್ಟುವಂತೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಿದರು.
ಇದರ ಜೊತೆಗೆ, ಭಾಷಾವಾರು ಪ್ರಾಂತಗಳ ಒಗ್ಗೂಡಿಸುವಿಕೆಯ ಹೆಸರಿನಲ್ಲಿ ನಡೆದ ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ದಿ.ಚಂದ್ರಶೇಖರ ಪಾಟೀಲರು ನಡೆಸಿದ ಮಹತ್ವದ ಹೋರಾಟವನ್ನು ನೆನಪಿಸುವ ಚಿತ್ರಗಳ ಕುರಿತು ನಾಗರಾಜ್ ಕರ್ಪೂರ ಸಮಗ್ರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸಿದರು.

ಇದೇವೇಳೆ, ಕುಟುಂಬದಲ್ಲಿರುವ ಅಜ್ಜ-ಅಜ್ಜಿಯಂದಿರನ್ನು ಹೇಗೆ ಗೌರವದಿಂದ ಕಾಣಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಲು ಮೊಮ್ಮಕ್ಕಳಿಂದ ಅಜ್ಜ-ಅಜ್ಜಿಯಂದಿರಿಗೆ ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಹೈದ್ರಾಬಾದ್ ರಾಮಕೃಷ್ಣ ಆಶ್ರಮದ ಪರಮಪೂಜ್ಯ ಬ್ರಹ್ಮಚಾರಿ ಶ್ರೀ ಸತ್ಯಚೈತನ್ಯ, ಹುಮನಾಬಾದ್ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಭೀಮರಾವ್ ಬಿ.ಪಾಟೀಲ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೋಮನಾಥ ಪಾಟೀಲ್, ಬೀದರ್ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅಭಯ್ ಹಬೀಬ್, ವಿವೇಕಾನಂದ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ರಮೇಶ್ ಗಾದಾ, ಘಾಟ್‍ಬೋರಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಲಕ್ಷ್ಮಿ ಮೇತ್ರೆ ಅವರು ಸಮಾರಂಭಕ್ಕೆ ಸಾಕ್ಷಿಯಾದರು.

ಅಜ್ಜನ ಹೋರಾಟಕ್ಕೆ ‘ಕರ್ಪೂರ’ದ ಬೆಳಕು
ಈ ಮಧ್ಯೆ, ದಿ.ಚಂದ್ರಶೇಖರ ಪಾಟೀಲ್ ಮಹಾಗಾಂವ್ ಅವರ ಮೊಮ್ಮಗ, ಚಿಂತಕ ಹಾಗೂ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಮಲ್ಲಪ್ಪ ಕರ್ಪೂರ ಅವರು ಅಜ್ಜ-ಅಜ್ಜಿಯಂದಿರ ದಿನಾಚರಣೆ ಸಂದರ್ಭದಲ್ಲಿ ತಮ್ಮ ತಾತಾ ದಿ.ಚಂದ್ರಶೇಖರ ಪಾಟೀಲರನ್ನು ವಿಶೇಷ ರೀತಿಯಲ್ಲಿ ಸ್ಮರಿಸಿದರು.
ವಿವೇಕಾನಂದ ಎಜುಕೇಷನ್ ಸೊಸೈಟಿಯ ರಾಮ್ ಅ್ಯಂಡ್ ರಾಜ್ ಶಾಲೆಯ ಹಳೆಯ ವಿದ್ಯಾರ್ಥಿಯೂ ಆಗಿರುವ ಕರ್ಪೂರ ಅವರು ತಮ್ಮ ಅಜ್ಜನ ಸ್ವಾತಂತ್ರ್ಯ ಹೋರಾಟದ ಹೆಜ್ಜೆಗಳನ್ನು ನೆನಪಿಸುವ 60ಕ್ಕೂ ಹೆಚ್ಚು ಅಪರೂಪದ ಚಿತ್ರಗಳ ಪ್ರದರ್ಶನವನ್ನು ಶಾಲೆಯಲ್ಲಿ ಹಮ್ಮಿಕೊಂಡಿದ್ದರು. ಹೀಗೆ ತಾತನ ಸ್ಮರಣೆಯಲ್ಲಿ ಒಂದಲ್ಲ ಒಂದು ಕಾರ್ಯಕ್ರಮವನ್ನು ಮೇಲಿಂದ ಮೇಲೆ ಶಾಲಾ-ಕಾಲೇಜುಗಳಲ್ಲಿ ಕರ್ಪೂರ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.
ವಿಶೇಷವಾಗಿ ಇತ್ತೀಚೆಗೆ ದಿ.ಚಂದ್ರಶೇಖರ ಪಾಟೀಲ್ ಮಹಾಗಾಂವ್ ಅವರ ಬದುಕು ಮತ್ತು ಸ್ವಾತಂತ್ರ್ಯ ಹೋರಾಟದ ಕ್ಷಣಗಳನ್ನು ದಾಖಲಿಸುವ ಮಹತ್ವದ ಕೆಲಸವನ್ನು ಸಹ ನಾಗರಾಜ್ ಕರ್ಪೂರ ಅವರು ಮಾಡಿದ್ದು, ‘ಚಂದ್ರಶೇಖರ್ ಪಾಟೀಲ್ ಮಹಾಗಾಂವ್- ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧ’ ಎಂಬ 316 ಪುಟಗಳ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಯ ವಿಶೇಷತೆ ಎಂದರೆ, ಏಕಕಾಲದಲ್ಲಿ ಒಟ್ಟು ಐದು ಭಾಷೆಗಳಲ್ಲಿ ಈ ಪುಸ್ತಕ ಪ್ರಕಟಿಸಲಾಗಿದೆ. ಖ್ಯಾತ ಸಂಶೋಧಕರು ಹಾಗೂ ಲೇಖಕ ಡಾ.ಬಿ.ಸಿ.ಮಹಾಬಲೇಶ್ವರಪ್ಪ ಅವರು ಆಂಗ್ಲ ಭಾಷೆಯಲ್ಲಿ ರಚಿಸಿರುವ ಈ ಕೃತಿಯನ್ನು ಡಾ.ಮಹಾಬಲೇಶ್ವರಪ್ಪ ಅವರ ಧರ್ಮಪತ್ನಿ ಶ್ರೀಮತಿ ಶಿವಗಂಗಾ ಅವರು ಕನ್ನಡದಲ್ಲಿ ‘ಚಂದ್ರಶೇಖರ ಪಾಟೀಲ್- ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧ’ ಎಂದು ಅನುವಾದಿಸಿದ್ದು, ಬೀದರ್ ಬಿ.ವಿ.ಬಿ.ಕಾಲೇಜಿನ ವಿಶ್ರಾಂತ ಪ್ರೊಫೆಸರ್ ದೇವೆಂದ್ರ ಕಮಲ್ ಅವರು ‘ಚಂದ್ರಶೇಖರ ಪಾಟೀಲ್- ಏಕ್ ರಾಷ್ಟ್ರವಾದಿ ಕ್ರಾಂತಿಸ್ತ್ರೋತ’ ಎಂದು ಹಿಂದಿ ಭಾಷೆಗೆ ಭಾಷಾಂತರಿಸಿದ್ದಾರೆ. ಮತ್ತೊಂದೆಡೆ, ಬೀದರ್ ವಾಯುಸೇನಾ ವಿದ್ಯಾಲಯದ ಶಿಕ್ಷಕಿ ಶ್ರೀಮತಿ ಇಂದುಮತಿ ಸುತಾರೆ ಹಾಗೂ ಬೀದರ್‍ನ ಹಿರಿಯ ಶಿಕ್ಷಕಿ ಅಂಬುಜಾ ಕುಲಕರ್ಣಿ ಅವರು ‘ಚಂದ್ರಶೇಖರ ಪಾಟೀಲ್- ಏಕ್ ರಾಷ್ಟ್ರವಾದಿ ಕ್ರಾಂತಿಸ್ತ್ರೋತ’ ಎಂದು ಮರಾಠಿಗೆ ತರ್ಜುಮೆ ಮಾಡಿದ್ದರೆ, ವಿಶ್ರಾಂತ ಇಂಗ್ಲಿಷ್ ಉಪನ್ಯಾಸಕರಾದ ಶ್ರೀಮತಿ ಶಿವನೂರಿ ಲಲಿತ ಹಾಗೂ ಕೆ.ಗಂಗಿರೆಡ್ಡಿ ಅವರು ತೆಲುಗು ಭಾಷೆಯಲ್ಲಿ ‘ಚಂದ್ರಶೇಖರ ಪಾಟೀಲ್-ವಿಪ್ಲವ ಜಾತೀಯವಾದಿ’ ಎಂದು ಭಾಷಾಂತರಿಸಿದ್ದಾರೆ. ಹೀಗೆ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ಪ್ರಕಟಗೊಂಡ ಈ ಕೃತಿಯು ಕಳೆದ ಸೆಪ್ಟೆಂಬರ್ 17, 2022ರಂದು (ಕಲ್ಯಾಣ ಕರ್ನಾಟಕ ವಿಜಯೋತ್ಸವ ದಿನ) ಲೋಕಾರ್ಪಣೆಗೊಂಡಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುನ್ನುಡಿ ಬರೆದಿರುವ ಈ ಕೃತಿಯನ್ನು ಸ್ವತಃ ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಲೋಕಾರ್ಪಣೆಗೊಳಿಸಿದ್ದು ಮತ್ತೊಂದು ಮಹತ್ವದ ಅಂಶ.
ಇದಿಷ್ಟೇ ಅಲ್ಲ; ಮಹತ್ವದ ದಿನಗಳಂದು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ದಿ.ಚಂದ್ರಶೇಖರ ಪಾಟೀಲರ ಹೋರಾಟದ ಕುರಿತು ಜಾಗೃತಿ ಮೂಡಿಸಲು ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಜಾಗೃತಿ ಶಿಬಿರಗಳನ್ನು ನಾಗರಾಜ್ ಕರ್ಪೂರ ಅವರು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.