ಅಜೆಕಾರಿನ ಅಜೆಕಾರು ಜೀವನ ಚಿತ್ರಣ ಕೃತಿಬಿಡುಗಡೆ-ಸನ್ಮಾನ

ಮಂಗಳೂರು, ಎ.೨೧- ಕಾರ್ಕಳ ಹಿರಿಯ ಪತ್ರಕರ್ತ, ಬೆಳದಿಂಗಳ ಸಾಹಿತ್ಯ ಸಮ್ಮೇಳನದ ರೂವಾರಿ ಡಾ| ಶೇಖರ ಅಜೆಕಾರು ಕುರಿತು, ಯುವ ಸಾಹಿತಿ, ಹೆಬ್ರಿ ಎಸ್.ಆರ್ ಸಮೂಹ ವಿದ್ಯಾ ಸಂಸ್ಥೆಯ ಉಪನ್ಯಾಸಕ ದೀಪಕ್ ಎನ್.ದುರ್ಗಾ ರಚಿಸಿರುವ ಅಜೆಕಾರಿನ ಅಜೆಕಾರು ಜೀವನ ಚಿತ್ರಣ ಕೃತಿಯನ್ನು ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮತ್ತು ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಅವರು ಜಂಟಿಯಾಗಿ ಬಿಡುಗಡೆಗೊಳಿಸಿದರು.
ಶ್ರೀ ಪ್ರಕಾಶನ ಸಂಸ್ಥೆ ಕೃತಿಯನ್ನು ಲೋಕಾರ್ಪಣೆ ಮಾಡಿದ್ದು ಪ್ರಕಾಶನದ ವತಿಯಿಂದ ಡಾ| ಶೇಖರ ಅಜೆಕಾರು ಮತ್ತು ಸೌಮ್ಯಶ್ರೀ ಶೇಖರ್ ದಂಪತಿಯನ್ನು ಸನ್ಮಾನಿಸಲಾಯಿತು.
ಕನ್ನಡದ ಕೆಲಸವನ್ನು ಶ್ರದ್ದೆ ಕಾಳಜಿಯೊಂದಿಗೆ ಮಾಡುತ್ತಾ ಬಂದಿರುವ ಶೇಖರ ಅಜೆಕಾರು ಅವರ ಬಗೆಗಿನ ದಾಖಲಾತಿ ಈ ಕೃತಿಯ ಮೂಲಕ ಆಗುತ್ತಿರುವುದು ಸಂತಸದ ವಿಷಯ ಎಂದು ಹರಿಕೃಷ್ಣ ಪುನರೂರು ಪ್ರಶಂಸಿದರು.
ಕನ್ನಡದ ಕೆಲಸವನ್ನು ಹೊಸತನಗಳೊಂದಿಗೆ ಮಾಡುತ್ತಾ ಬಂದಿರುವ ಅಜೆಕಾರು ಅವರ ಜೀವನ ಸಾಧನೆ ಈ ರೀತಿ ಅನಾವರಣ ಆಗುತ್ತಿರುವುದು ತುಂಬಾ ಸಂತೋಷದ ವಿಚಾರ ಎಂದು ಡಾ| ಮೋಹನ ಆಳ್ವ ಹೇಳಿದರು.
ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೇಣುಗೋಪಾಲ್ ಸಭಾಧ್ಯಕ್ಷತೆ ವಹಿಸಿದ್ದು, ಕಾರ್ಯಕ್ರಮದಲ್ಲಿ ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಮೂಡುಬಿದಿರೆ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಉದ್ಯಮಿ ಶ್ರೀಪತಿ ಭಟ್, ಶಿಲ್ಪಿ ಕೆ.ನರಸಿಂಹಾಚಾರ್ ಅಮವಾಸ್ಯೆಬೈಲ್, ರಾಜಕೀಯ ಧುರೀಣ ಕೆ.ಜಗದೀಶ ಅಧಿಕಾರಿ, ಶಾರದಾ ದೇವಿ ಮೂಡುಬಿದಿರೆ, ಪ್ರೇಮಾಶ್ರೀ ಕಲ್ಲಬೆಟ್ಟು, ಪ್ರಮೀಳಾ ಬಿ.ಆಚಾರ್ಯ, ಲೇಖಕ ದೀಪಕ್ ಎನ್ ಆಚಾರ್ಯ, ವಿಶೇಷ ಆಕರ್ಷಣೆಯಾಗಿ ೭ ವರ್ಷದ ಕೆಳಗಿನ ಮಕ್ಕಳ ಪುಟಾಣಿ ವಂಡರ್ ಶೋ ಕಾರ್ಯಕ್ರಮದಲ್ಲಿ ವಿಶ್ವದಾಖಲೆಯ ಆದ್ಯ ಎ.ಮಂಗಳೂರು, ತನಿಶಾ ಕಾರ್ಕಳ, ಎರಡೂವರೆ ವರ್ಷದ ಪ್ರತಿಭೆ ಸಾನಿಧ್ಯ ಕವತ್ತಾರು, ಸುನಿಜಾ ಅಜೆಕಾರು, ಸುನಿಧಿ ಎಸ್. ಅಜೆಕಾರು, ಆದ್ಯ ಕಾರ್ಕಳ ಮೊದಲಾದವರು ಭಾಗವಹಿಸಿದ್ದರು. ಯುವ ವಾಗ್ಮಿ ಪ್ರದ್ಯುಮ್ನಮೂರ್ತಿ ಕಡಂದಲೆ ಪುಸ್ತಕ ಪರಿಚಯಗೈದು ವಂದಿಸಿದರು.