ಅಜೀರ್ಣಕ್ಕೆ ಮನೆ ಮದ್ದು

ಹೊಟ್ಟೆಯ ಸಮಸ್ಯೆಗಳು ಯಾರನ್ನು ತಾನೇ ಬಿಟ್ಟಾವು? ಆಗಾಗ ಹೊಟ್ಟೆನೋವು, ಅಜೀರ್ಣ, ವಾಂತಿ, ಹೊಟ್ಟೆ ಉರಿ, ಗ್ಯಾಸ್, ಎದೆಯುರಿ ಮುಂತಾದ ಸಮಸ್ಯೆಗಳು ಬಹುತೇಕ ಎಲ್ಲರನ್ನೂ ಬಿಟ್ಟೂ ಬಿಡದೆ ಕಾಡುತ್ತವೆ. ಇದಕ್ಕೆಲ್ಲ ಮೆಡಿಕಲ್ ಸ್ಟೋರ್‌ಗೆ ಓಡುವ ಬದಲು ಮನೆಯಲ್ಲೇ ಹತ್ತು ಹಲವು ಸುಲಭದ ಔಷಧಿ ಮಾಡಿಕೊಳ್ಳಬಹುದು.
ಶುಂಠಿ: ಶುಂಠಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ಹಾಗಾಗಿ, ಹೊಟ್ಟೆ ಕೆಟ್ಟಾಗ ಮೊದಲು ನೀವು ತಿರುಗಬೇಕಾದುದೇ ಇದರತ್ತ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ಸ್ ಹಾಗೂ ಜಿಂಜೆರಾಲ್ಸ್ ಅಜೀರ್ಣ ಹಾಗೂ ಸಂಕಟಕ್ಕೆ ಸುಲಭ ಪರಿಹಾರ ಒದಗಿಸುತ್ತವೆ. ಗ್ಯಾಸ್ಟ್ರಿಕ್ ತಗ್ಗಿಸಲು ಕೂಡಾ ಇದರಲ್ಲಿರುವ ಫಿನೋಲಿಕ್ ಕಾಂಪೌಂಡ್ಸ್ ಸಹಾಯ ಮಾಡುತ್ತವೆ. ಹೊಟ್ಟೆ ಕೆಟ್ಟಾಗ ಶುಂಠಿಯ ಕಷಾಯ ಮಾಡಿ ಸೇವಿಸಿ. ಶುಂಠಿ ತಂಬುಳಿ ಕೂಡಾ ಒಳ್ಳೆಯದು.
ಬೇಕಿಂಗ್ ಸೋಡಾ: ಅಜೀರ್ಣಕ್ಕೆ ಅತಿಯಾದ ಆಸಿಡ್ ಮಟ್ಟ ಕಾರಣ ವಾದಾಗ ಬೇಕಿಂಗ್ ಸೋಡಾ ಸಹಾಯಕ್ಕೆ ಬರುತ್ತದೆ. ಬೀನ್ಸ್, ಕೋಸು, ಹಾಲಿನ ಪದಾರ್ಥಗಳು ಹಾಗೂ ಈರುಳ್ಳಿ ಸಾಮಾನ್ಯವಾಗಿ ಅಜೀರ್ಣಕ್ಕೆ ಕಾರಣವಾಗುತ್ತವೆ. ಇಂಥ ಸಂದರ್ಭದಲ್ಲಿ ಆಸಿಡ್ ಪರಿಣಾಮವನ್ನು ತಗ್ಗಿಸಲು ಬೇಕಿಂಗ್ ಸೋಡಾದಲ್ಲಿರುವ ಸೋಡಿ
ಯಂ ಬೈಕಾರ್ಬೋನೇಟ್ ಸಹಾಯಕ್ಕೆ ಬರುತ್ತದೆ. ಇದು ತಕ್ಷಣವೇ ಆಸಿಡ್ ನ್ಯೂಟ್ರಲೈಸ್ ಮಾಡಿ ಗ್ಯಾಸ್‌ನಿಂದ ಶಮನ ಮಾಡುತ್ತದೆ.
ಅಜ್ವಾನ್: ಓಮಿನ ಕಾಳೆಂದು ಕರೆಸಿಕೊಳ್ಳುವ ಅಜ್ವಾನ್ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಪದಾರ್ಥ. ಆಯುರ್ವೇದದಲ್ಲಿ ಔಷಧವಾಗಿ ಬಳಕೆಯಾಗುವ ಅಜ್ವಾನ್ ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ. ಇದರಲ್ಲಿರುವ ಆಕ್ಟಿವ್ ಎಂಜೈಮ್‌ಗಳು ಆರೋಗ್ಯಕರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಮಲಬದ್ಧತೆ, ಗ್ಯಾಸ್ ನಿಯಂತ್ರಿಸುತ್ತದೆ.
ನೆಲ್ಲಿಕಾಯಿ: ನೆಲ್ಲಿಕಾಯಿಯಲ್ಲಿ ಫೈಬರ್ ಅಧಿಕ. ಹಾಗಾಗಿ ಇದು ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಇದರ ಹಲವಾರು ಆರೋಗ್ಯ ಲಾಭಗಳಲ್ಲಿ ಮಲಬದ್ಧತೆ ನೀಗಿಸಿ ಗ್ಯಾಸ್ಟ್ರಿಕ್ ಜ್ಯೂಸ್‌ಗಳು ಚೆನ್ನಾಗಿ ಬಿಡುಗಡೆಯಾಗುವಂತೆ ನೋಡಿಕೊಳ್ಳುವುದೂ ಒಂದು.
ಮೆಂತ್ಯ: ಹೊಟ್ಟೆ ಕೆಟ್ಟ ಸೂಚನೆ ಸಿಕ್ಕ ಕೂಡಲೆ ಸ್ವಲ್ಪ ಮೆಂತ್ಯೆಯನ್ನು ನೀರಿನಲ್ಲಿ ಹಾಕಿ ೧೦ ನಿಮಿಷ ಕುದಿಸಿ ಬಳಿಕ ಕುಡಿಯಿರಿ. ಮೆಂತ್ಯೆ ಟೀ ಮಾಡಿಕೊಂಡು ಕೂಡಾ ಕುಡಿಯಬಹುದು. ಇದು ಅಜೀರ್ಣಕ್ಕೆ ರಾಮಬಾಣ.
ನಿಂಬೆನೀರು: ನಿಂಬೆನೀರಿನ ಅಲ್ಕಲೈನ್ ಪರಿಣಾಮದಿಂದಾಗಿ ಹೊಟ್ಟೆಯ ಆಸಿಡ್ ನ್ಯೂಟ್ರಲೈಸ್ ಆಗಿ ಜೀರ್ಣಕ್ರಿಯೆ ಸರಾಗಗೊಳ್ಳುತ್ತದೆ. ನಿಂಬೆರಸವನ್ನು ಬಿಸಿನೀರಿನಲ್ಲಿ ಬೆರೆಸಿ ಕುಡಿಯುವುದು ಉತ್ತಮ.