ಅಜಿತ್ ಸಹೋದರ ಸೇರಿ ನಾಲ್ವರಿಗೆ ಲೋಕಾ ನೋಟೀಸ್

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜೂ.೩೦-ನೂರಾರು ಕೋಟಿ ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದು,ಅವರ ಸಹೋದರ ಸೇರಿ ನಾಲ್ವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಅಜಿತ್ ಕುಮಾರ್ ರೈ ಅವರ ಸಹೋದರರಾದ ಆಶಿಕ್ ರೈ, ಸ್ನೇಹಿತರಾದ ಗೌರವ ,ಹರ್ಷವರ್ಧನ್ ಸೇರಿದಂತೆ ನಾಲ್ವರಿಗೂ ಇಂದು ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸಹಕಾರನಗರದ ಅಜಿತ್ ನಿವಾಸ ಸೇರಿ ೧೨ ಕಡೆ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ವೇಳೆ ಮನೆಯಲ್ಲಿ ಕೋಟ್ಯಂತರ ರೂ ೧೧ ಲಕ್ಸುರಿ ಕಾರುಗಳು, ಭೂದಾಖಲಾತಿ ಪತ್ರಗಳು, ಅವರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿರುವ ಬಗ್ಗೆಯೂ ದಾಖಲೆಗಳು ಪತ್ತೆಯಾಗಿವೆ.
ಇದಲ್ಲದೇ ೪೦ ಲಕ್ಷ ರೂ ನಗದು, ಕೋಟ್ಯಂತರ ಭೂ ದಾಖಲಾತಿ ಪತ್ರಗಳು, ದುಬಾರಿ ಬೆಲೆಯ ಕಾರು ಖರೀದಿಸಿದ ರಶೀದಿಗಳು, ದೇಶ-ವಿದೇಶಿ ಬ್ರ್ಯಾಂಡ್ ಮದ್ಯಗಳು ಪತ್ತೆಯಾಗಿದ್ದವು. ಸತತ ೩೦ ಗಂಟೆ ಶೋಧ ಮುಕ್ತಾಯ ಬಳಿಕ ಮಹಜರು ಮಾಡಿದ ಸ್ಥಿರಾಸ್ತಿ-ಚರಾಸ್ತಿ ಪರಿಶೀಲಿಸಿದಾಗ ಅಕ್ರಮ ಆಸ್ತಿ ಗಳಿಕೆ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಜಿತ್ ರೈ ಅವರನ್ನು ಅಧಿಕಾರಿಗಳು ಬಂಧಿಸಿದ್ದರು. ಅಜಿತ್ ಅವರನ್ನು ಇಂದು ಬೆಳಗ್ಗೆ ೧೧ ಗಂಟೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ ೧೦ ದಿನಗಳ ಕಾಲ ಅಜಿತ್ ಅವರನ್ನು ಪೊಲೀಸ್ ವಶಕ್ಕೆ ಪಡೆಯಲು ನಿರ್ಧರಿಸಿದ್ದಾರೆ.
ಫಾರ್ಚೂನರ್, ಲ್ಯಾಂಡ್ ಕ್ರೂಸರ್, ಥಾರ್ ಸೇರಿದಂತೆ ಇತರೆ ವಾಹನಗಳು ಬಹುತೇಕ ಹರ್ಷವರ್ಧನ್ ಹಾಗೂ ನವೀನ್ ಅವರ ಹೆಸರಿನಲ್ಲಿ ಇರುವುದು ಕಂಡುಬಂದಿದೆ. ಸರ್ಚ್ ವಾರೆಂಟ್ ಮೇರೆಗೆ ಮತ್ತೋರ್ವ ಬೇನಾಮಿಯಾಗಿರುವ ಸಿ.ಕೃಷ್ಣಪ್ಪ ನಾಪತ್ತೆಯಾಗಿದ್ದು ಆತನಿಗೆ ಇನ್ನಷ್ಟೇ ವಿಚಾರಣೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಬೇಕಿದೆ.
ನೋಟಿಸ್ ನೀಡಲಾಗಿರುವ ಬೇನಾಮಿಗಳೆಲ್ಲರೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದವರು. ಹಲವು ವರ್ಷಗಳಿಂದ ಇವರ ನಡುವೆ ಕೋಟ್ಯಂತರ ರೂ ವರ್ಗಾವಣೆಯಾಗಿರುವುದು ಮಾಹಿತಿ ಲಭ್ಯವಾಗಿದ್ದು, ಕೂಲಂಕಷವಾಗಿ ಪರಿಶೀಲಿಸಿದ ಬಳಿಕವಷ್ಟೇ ಖಚಿತವಾಗಿ ಎಷ್ಟೆಷ್ಟು ಎಲ್ಲಿ ಹಣ ವರ್ಗಾವಣೆಯಾಗಿದೆ ಎಂಬುವುದು ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆ.ಆರ್.ಪುರದ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಜಿತ್ ಅವರನ್ನು ರಾಜಕಾಲುವೆ ಒತ್ತುವರಿದಾರರಿಗೆ ಸಹಕಾರ ನೀಡಿ ಹೈಕೋರ್ಟ್?ನಿಂದ ತಡೆಯಾಜ್ಞೆ ತರಲು ನೆರವು ನೀಡಿದ್ದರು ಎಂಬ ಆರೋಪದಡಿ ರಾಜ್ಯ ಸರ್ಕಾರ ಅಮಾನತು ಮಾಡಿತ್ತು. ಬಳಿಕ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದುಕೊಂಡಿದ್ದರಿಂದ ಮತ್ತೆ ಕೆ ಆರ್ ಪುರ ತಹಶೀಲ್ದಾರ್ ಆಗಿ ಅಜಿತ್ ಬಂದಿದ್ದರು. ಕಳೆದ ಒಂದು ವಾರದ ಹಿಂದಷ್ಟೇ ಸ್ಥಳ ತೋರಿಸದೆ ರೈ ಅವರನ್ನು ವರ್ಗಾವಣೆ ಮಾಡಲಾಗಿತ್ತು.
ಬಾಕ್ಸ್
ಆದಾಯಕ್ಕೂ ಮೀರಿ ಅಪಾರ ಆಸ್ತಿ ಪಾಸ್ತಿ ಹೊಂದಿದ್ದ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು ಇಂದು ಲೋಕಾಯುಕ್ತ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದ ಲೋಕಾಯುಕ್ತ ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ ತಹಶೀಲ್ದಾರ್ ಅಜಿತ್ ರವರನ್ನು ಜುಲೈ ೬ರವರೆಗೆ ಅಂದರೆ ೭ ದಿನಗಳ ಕಾಲ ಲೋಕಾಯುಕ್ತರ ಪೊಲೀಸರ ವಶಕ್ಕೆ ನೀಡಿದೆ.