ಅಜಾದಿಕಾ ಅಮೃತ್ ಮಹೋತ್ಸವ ಯೋಗಾಥಾನ್‍ಗೆ ಒಂದು ಲಕ್ಷ ಯೋಗಪಟುಗಳು ಭಾಗಿ

ಮೈಸೂರು: ಡಿ.31:- 2022-23 ನೇ ಸಾಲಿನ ಅಜಾದಿಕಾ ಅಮೃತ್ ಮಹೋತ್ಸವ ಯೋಗಥಾನ್ ಕಾರ್ಯಕ್ರಮವನ್ನು 2023 ರ ಜನವರಿ 15 ರಂದು ಹಮ್ಮಿಕೊಂಡಿದ್ದು, ಮೈಸೂರು ಯೋಗಕೇಂದ್ರವಾಗಿರುವುದರಿಂದ ಒಂದು ಲಕ್ಷ ಯೋಗಪಟುಗಳನ್ನು ಯೋಗಥಾನ್‍ಗೆ ಸೇರಿಸಿ ಎಂದು ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಅವರು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಜಾದಿಕಾ ಅಮೃತ್ ಮಹೋತ್ಸವ ಅಂಗವಾಗಿ ಯೋಗಾಥಾನ್ ಕಾರ್ಯಕ್ರಮ ಆಯೋಜಿಸುವ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೈಸೂರಿನ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಖಾಸಗಿ ಇಲಾಖೆಗಳ ಜೊತೆಗೂಡಿ ಚರ್ಚಿಸಿ ಕಾರ್ಯಕ್ರಮಕ್ಕೆ ಸಂಬಂಧಿತ ವಿಚಾರಗಳ ಮತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಬೇಕಿರುವ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ. ಕಳೆದ ಬಾರಿಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಯೋಗಪಟುಗಳ ಅಂಕಿ ಅಂಶಕ್ಕಿಂತ ಈ ಬಾರಿ ಒಂದು ಲಕ್ಷ ಅಭ್ಯರ್ಥಿಗಳು ಭಾವಹಿಸುವಂತೆ ಮಾಡಬೇಕು. ಇದಕ್ಕೆ ಸಂಬಂಧಿತವಾಗಿ ಜಿಲ್ಲೆಗೆ ಸಂಬಂಧಿತ ಸರ್ಕಾರಿ, ಸರ್ಕಾರೇತರ ಸಂಸ್ಥೆಯಲ್ಲಿ ಇರುವ ವಿದ್ಯಾರ್ಥಿಗಳನ್ನು, ಜಿಲ್ಲೆಯಲ್ಲಿ ಇರುವ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಹಾಜರಾಗುವಂತೆ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಬರುವಂತಹ ಯೋಗಪಟುಗಳ ಬಗ್ಗೆ ಸರಿಯಾದ ಅಂಕಿ ಅಂಶಗಳನ್ನು ಪಡೆದುಕೊಳ್ಳಿ. ಬರುವಂತಹ ಎಲ್ಲರಿಗೂ ಮಹಾನಗರ ಪಾಲಿಕೆ ವತಿಯಿಂದ ಕುಡಿಯುವ ನೀರು, ಶೌಚಾಲಯ, ಮತ್ತು ಶುಚಿತ್ವದ ವ್ಯವಸ್ಥೆಯನ್ನು ಮಾಡಲಾಗುವುದು. ಹೆಚ್ಚಿನ ಸುರಕ್ಷತಾ ಕ್ರಮಕಾಗಿ ಆಂಬುಲೆನ್ಸ್ ವ್ಯವಸ್ಥೆ ಮತ್ತು ಯೋಗಕಾರ್ಯಕ್ರಮಕ್ಕೆ ಬರುವ ಅಭ್ಯರ್ಥಿಗಳಿಗೆ ಯೋಗ ಶಿಕ್ಷಕರನ್ನು ಆಯೋಜಿಸಬೇಕು ಎಂದು ಸಂಬoಧಿಸಿದ ಇಲಾಖೆಗಳಿಗೆ ತಿಳಿಸಿದರು.
ಸಭೆಯಲ್ಲಿ ಮೈಸೂರು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಪ್ರೇಮ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು