ಅಜಯ್ ಮಧ್ಯೆ ಟ್ವಿಟ್ ವಾರ್ ಮೂರನೆಯವರ ಕೈವಾಡ: ಸುದೀಪ್

ಬೆಂಗಳೂರು, ಜು ೨೦- ಹಿಂದಿ ರಾಷ್ಟ್ರಭಾಷೆ ಬಗ್ಗೆ ನಟ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ನಡೆದ ಟ್ವಿಟ್‌ವಾರ್‌ಎಲ್ಲೆಡೆ ಭಾರಿ ಸುದ್ದಿಯಾಗಿತ್ತು. ಇದೀಗ ಆ ವಾರ್‌ಬಗ್ಗೆ ಸುದೀಪ್ ಮತ್ತೆ ಮಾತನಾಡಿ ಗಮನ ಸೆಳೆದಿದ್ದಾರೆ,
ಈ ಬಗ್ಗೆ ಸುದೀಪ್ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿ ಅಂದು ನಮ್ಮಿಬ್ಬರ ನಡುವೆ ಯಾರೋ ಮೂರನೇ ವ್ಯಕ್ತಿ ಅನವಶ್ಯಕವಾಗಿ ವಿವಾದ ತಂದಿಟ್ಟಿದ್ದರು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
‘ನನ್ನ ಮಾತನ್ನು ಯಾರೋ ತಪ್ಪಾಗಿ ಅರ್ಥ ಬರುವಂತೆ ಅಜಯ್ ದೇವಗನ್ ಗೆ ತಂದಿಟ್ಟಿದ್ದರು. ಆದರೆ ನಾನು ಸ್ಪಷ್ಟನೆ ನೀಡಿದ ಕೂಡಲೇ ಅಜಯ್ ರಿಟ್ವೀಟ್ ಮಾಡಿ ನನಗೆ ಉತ್ತರ ಸಿಕ್ಕಿತು ಎಂದು ಧನ್ಯವಾದ ಸಲ್ಲಿಸಿದರು. ಆ ಮೂರನೇ ವ್ಯಕ್ತಿ ಯಾರೋ ನನಗೆ ಗೊತ್ತಿರುವವರೇ ಆಗಿದ್ದಾರೆ. ಆದರೆ ಯಾರು ಎಂದು ನಾನು ಇಲ್ಲಿ ಖಚಿತವಾಗಿ ಹೇಳಲಾರೆ’ ಎಂದಿದ್ದಾರೆ.
ದಕ್ಷಿಣ ಭಾರತದ ಜನರು ಶಾಲೆಗೆ ಹೋಗುವುದಕ್ಕಿಂತ ಮುಂಚೆಯೇ ಹಿಂದಿಯನ್ನು ಕಲಿತಿದ್ದಾರೆ ಎಂದು ಸುದೀಪ್ ತಮಾಷೆ ಮಾಡಿದ್ದಾರೆ, ದಕ್ಷಿಣದಲ್ಲಿ, ನಮ್ಮ ಶಾಲೆಯಲ್ಲಿ ಎರಡನೇ ಭಾಷೆ ಅಥವಾ ಮೂರನೇ ಭಾಷೆಯಾಗುವ ಮೊದಲು ನಾವೆಲ್ಲರೂ ಹಿಂದಿ ಕಲಿತಿದ್ದೇವೆ. ನಮಗೆ ಇಬ್ಬರು ಶಿಕ್ಷಕರಿದ್ದರು. ಕಿಶೋರ್ ಕುಮಾರ್ ಜಿ ಮತ್ತು ಅಮಿತ್ ಜಿ (ಅಮಿತಾಭ್ ಬಚ್ಚನ್). ಇವರಿಬ್ಬರಿಂದಾಗಿ ನಾವು ಶಾಲೆಗೆ ಹೋಗುವ ಮೊದಲೇ ಹಿಂದಿ ಕಲಿತಿದ್ದೇವೆ. ಅವರು ಬಲವಂತವಾಗಿ ನಮಗೆ ಕಲಿಸಿದ್ದಾರೆ. ಅವರ ಹಾಡುಗಳು ಮತ್ತು ಬಚ್ಚನ್ ಅವರ ಸಂಭಾಷಣೆಗಳನ್ನು ಅರ್ಥಮಾಡಿಕೊಳ್ಳಲು, ಅಂದಿನಿಂದ ನಾವು ಹಿಂದಿಯನ್ನು ಪ್ರೀತಿಸುತ್ತಿದ್ದೇವೆ ಎಂದು ಸುದೀಪ್‌ಹೇಳಿದ್ದಾರೆ.
ಅಜಯ್ ಜೊತೆಗಿನ ಸಂಪೂರ್ಣ ಜಗಳವು ತಪ್ಪು ತಿಳುವಳಿಕೆಯಿಂದ ಸಂಭವಿಸಿದೆ ಎಂದು ಅವರು ಪುನರುಚ್ಚರಿಸಿದ್ದಾರೆ. ಸುದೀಪ್ ಅವರು ಈಗ ಭಾರತೀಯ ಚಿತ್ರರಂಗದಲ್ಲಿ ಹಿಂದಿಯ ಸ್ಥಾನದ ಬಗ್ಗೆ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ “ನನಗೆ ಹಿಂದಿ ವಿರುದ್ಧ ಹೋರಾಟವಿಲ್ಲ. ನನ್ನ ಸರಳ ವಿಷಯವೆಂದರೆ ಪ್ಯಾನ್-ಇಂಡಿಯಾ ಯಾವಾಗಲೂ ಹಿಂದಿ ಎಂದಾಗಬಾರದು. ಮರಾಠಿ, ಕನ್ನಡ, ತೆಲುಗು, ಪಂಜಾಬಿ, ತಮಿಳು ಚಿತ್ರಗಳೂ ಈಗ ಪ್ಯಾನ್ ಇಂಡಿಯಾ ಆಗುತ್ತಿವೆ. ನಾನು ಹೇಳಲು ಬಯಸಿದ್ದು ಇದನ್ನೆ ಎಂದಿದ್ದಾರೆ.
ಸುದೀಪ್‌ಅವರ ಮುಂಬರುವ ಕನ್ನಡ ಚಿತ್ರ–ವಿಕ್ರಾಂತ್ ರೋಣ– ಹಿಂದಿ ಜೊತೆಗೆ ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿಯೂ ಬಿಡುಗಡೆಯಾಗುತ್ತಿದೆ. ಜಾಕ್ವೆಲಿನ್ ಫರ್ನಾಂಡೀಸ್ ಕೂಡ ನಟಿಸಿರುವ ಈ ಚಿತ್ರ ಜುಲೈ ೨೮ ರಂದು ತೆರೆಗೆ ಬರಲಿದೆ.