ಅಚ್ಛೆದಿನ್ ಬದಲು ಹಳೆದಿನ ಬರಲಿ – ಬಾದರ್ಲಿ

ಸಿಂಧನೂರು.ಜೂ.೧೦-ಬಿಜೆಪಿ ಅಧಿಕಾರಕ್ಕೆ ಬಂದು ಮೋದಿ ಪ್ರಧಾನಿಯಾದರೆ ದೇಶದ ಜನರಿಗೆ ಅಚ್ಛೆದಿನ್ ಬರುತ್ತದೆ ಎಂದು ಬಿಜೆಪಿ ಪಕ್ಷ ಮತ್ತು ಮೋದಿ ಹೇಳಿದ್ದರು.
ಈಗ ಅಚ್ಛೆದಿನ್ ಬದಲು ಜನ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ ಇದರ ಬಗ್ಗೆ ದೇಶದ ಜನತೆ ಬಿಜೆಪಿ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದು ಯುವ ಕಾಂಗ್ರೆಸ್ ರಾಜ್ಯಧ್ಯಕ್ಷರಾದ ಬಸನಗೌಡ ಬಾದರ್ಲಿ ಹೇಳಿದರು.
ನಗರದ ಯುವ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದು ಇದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ೫ ದಿನಗಳ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದು ಜನರ ಹೋರಾಟವಾಗಿರುವದರಿಂದ ನಮ್ಮ ಜೊತೆ ಜನರು ಕೈ ಜೋಡಿಸಿ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಜನರಲ್ಲಿ ಮನವಿ ಮಾಡಿಕೊಂಡರು.
ಜೂ ೧೨ ರಂದು ಪೆಟ್ರೋಲ್ ಬಂಕ್ ಗಳ ಮುಂದೆ ಕಾಂಗ್ರೆಸ್ ನ ಯುವ, ಮಹಿಳಾ, ಕಿಸಾನ್, ಕಾರ್ಮಿಕ, ಎಸ್.ಸಿ, ಎಸ್.ಟಿ, ಸೇರಿದಂತೆ ಇನ್ನಿತರ ಘಟಕಗಳಿಂದ ನಗರದ ಪೆಟ್ರೋಲ್ ಬಂಕ್‌ಗಳ ಮುಂದೆ ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮಾಡಲಾಗುತ್ತದೆ.
ಜೂ.೧೩ ರಂದು ಜಿ.ಪ ವ್ಯಾಪ್ತಿಯಲ್ಲಿ ,೧೪ ರಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪೆಟ್ರೋಲ್ ಬಂಕ್‌ಗಳ ಮುಂದೆ ೧೫ ರಂದು ನಗರದ ಉಳಿದಿರುವ ಪೆಟ್ರೋಲ್ ಬಂಕ್‌ಗಳ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದರು.
ಹಿಂದೆ ಪೆಟ್ರೋಲ್ ಬೆಲೆ ಹೆಚ್ಚಾದಾಗ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರುಗಳು ಸೈಕಲ್ ತುಳಿದು ಪ್ರತಿಭಟನೆ ಮಾಡಿ ತೈಲ ಬೆಲೆ ಇಳಿಸುವಂತೆ ಹೋರಾಟ ಮಾಡಿದ್ದರು ,ಈಗ ಪೆಟ್ರೋಲ್ ಬೆಲೆ ಲೀಟರ್ ಗೆ ೧೦೦ ರೂ ಆದರೂ ಸಹ ಈ ಮುಖಂಡರು ಹೋರಾಟ ಮಾಡದೆ ಮೌನ ವಹಿಸಿರುವ ಬಗ್ಗೆ ಜನ ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಸಂಸದರು ಜನರ ಬಗ್ಗೆ ಧ್ವನಿ ಎತ್ತದೆ ಮುಖರಾಗಿರುವದು ಜನರಲ್ಲಿ ಬೇಸರ ತರಿಸಿದೆ .
ಕೊರೊನಾ ಸಂಕಷ್ಟದಲ್ಲಿ ವ್ಯಾಕ್ಸಿನ್, ಆಕ್ಸಿಜನ್ ,ಬೆಡ್ ಗಳು ಸಿಗದೆ ಜನ ಸಾಯುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಪ್ರಾಣ ಉಳಿಸುವಲ್ಲಿ ವಿಫಲವಾಗಿದೆ.ರೈತರು ,ಮಹಿಳೆಯರು ,ಯುವಕರು ,ಕಾರ್ಮಿಕರು ಉದ್ಯೋಗ ವಿಲ್ಲದೆ ಬದುಕಲು ಆಗದೇ ತೀವ್ರ ತೊಂದರೆ ಅನುಭವಿಸುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬಿಜೆಪಿಗೆ ಬೆಂಬಲಿಸಿದ ಕಾರಣ ಮೋದಿ ಎರಡನೇ ಸಲ ಪ್ರಧಾನಿ ಯಾಗಿದ್ದಾರೆ ಆದರೆ ಪೆಟ್ರೋಲ್ ಬೆಲೆ ಏರಿಸಿ ಯುವಕರಿಗೆ ಉದ್ಯೋಗ ಕೊಡದೆ ಬಿಜೆಪಿ ಪಕ್ಷ ಹಾಗೂ ಪ್ರಧಾನಿ ನಿರ್ಲಕ್ಷ್ಯ ಮಾಡಿದ್ದನ್ನು ಯುವಕರು ಅರ್ಥ ಮಾಡಿ ಕೊಳ್ಳಬೇಕು ನಮಗೆ ಅಚ್ಛೆದಿನ್ ಬೇಡ ಹಳೆ ದಿನ ಬರಲಿ ಎಂದು ದೇಶದ ಜನತೆ ಬಯಸುತ್ತಿದ್ದರೆಂದು ಬಸನಗೌಡ ಬಾದರ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಯುವ ಕಾಂಗ್ರೆಸ್ ಮುಖಂಡರಾದ ಆರ್.ವೆಂಕಟೇಶ ನಾಯಕ ,ಶಿವಕುಮಾರ ಜವಳಿ ,ದ್ರಾಕ್ಷಾಯಣಿ ,ಖಾಜಾ ರೌಡಕುಂದಾ, ನಾಗರಾಜ ಕವಿತಾಳ, ರಮೇಶ ನಾಯಕ, ಅಮರೇಶ ಬಾಗೋಡಿ, ನಿರುಪಾದಿ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.