ಅಗ್ರಿಗೋಲ್ಡ್ ವಂಚಿತರಿಂದ ಧರಣಿ ಸತ್ಯಾಗ್ರಹ

ಬಳ್ಳಾರಿ, ನ.3: ಅಗ್ರಿಗೋಲ್ಡ್ ಸಂಸ್ಥೆ ದೇಶದ ಎಂಟು ರಾಜ್ಯಗಳಲ್ಲಿನ ಸುಮಾರು 32 ಲಕ್ಷ ಜನ ತನ್ನ ಗ್ರಾಹಕರಿಗೆ 6,385 ಕೋಟಿ ಹಣವನ್ನು ಪಾವತಿಸಬೇಕಿದ್ದು, ಕರ್ನಾಟಕ ರಾಜ್ಯದಲ್ಲಿ ಸುಮಾರು 8.5 ಲಕ್ಷದಷ್ಟು ಗ್ರಾಹಕರಿಂದ ಅಂದಾಜು 1,700 ಕೋಟಿ ಹಣ ಠೇವಣಿ ಸಂಗ್ರಹಿಸಿ ವಂಚನೆ ಮಾಡಿದೆ. ರಾಜ್ಯ ಸರ್ಕಾರ ನೊಂದ ಅಗ್ರಿಗೋಲ್ಡ್ ಕಂಪನಿ ವಂಚಿತರಿಗೆ ಸಹಾಯ ಮಾಡುವಂತೆ ಒತ್ತಾಯಿಸಿ ನಿನ್ನೆ ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಸಾಂಕೇತಿಕವಾಗಿ ಧರಣಿ ನಡೆಸಿ ಕರ್ನಾಟಕ ಅಗ್ರಿಗೋಲ್ಡ್ ಗ್ರಾಹಕರ ಮತ್ತು ಏಜೆಂಟರ ಕ್ಷೇಮಾಭಿವೃದ್ಧಿ ಸಂಘವು ಪ್ರತಿಭಟನೆ ನಡೆಸಿ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಕೆ.ನಾಗಭೂಷಣರಾವ್ ಅವರು, ಕಳೆದ ಆರು ವರ್ಷಗಳಿಂದ ನಾವು ಹಲವಾರು ಬಾರಿ ಮನವಿ ನೀಡುತ್ತಾ ಬಂದಿದ್ದರೂ ಕೂಡಾ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರಯೋಜನವಾಲ್ಲ. ಯಾವರೀತಿ ಆಂಧ್ರ ಸರ್ಕಾರ ಮುಂದೆ ಬಂದು ಈಗಾಗಲೇ 10,000 ಕ್ಕಿಂತ ಕಡಿಮೆ ಹಣ ಪಾವತಿ ಮಾಡಿದ 3 ಲಕ್ಷ 70 ಸಾವಿರ ಗ್ರಾಹಕರಿಗೆ ಪರಿಹಾರ ನೀಡಿದ್ದು, ಅಲ್ಲದೇ ಇನ್ನೂ ಒಂದು ಹೆಜ್ಜೆ ಮುಂದಿಟ್ಟು 20000 ಕ್ಕಿಂತ ಕಡಿಮೆ ಹಣ ಪಾವತಿ ಮಾಡಿದ ಗ್ರಾಹಕರಿಗೆ ಪರಿಹಾರ ನೀಡಲು ತೀರ್ಮಾನ ನೀಡಿದೆ. ಅದೇರೀತಿ ಕರ್ನಾಟಕ ಸರ್ಕಾರವೂ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಎಐಟಿಯುಸಿ ಅಧ್ಯಕ್ಷ ಹೆಚ್.ಎ.ಆದಿಮೂರ್ತಿ, ಎಐವೈಎಫ್ ಜಿಲ್ಲಾಧ್ಯಕ್ಷ ಕಟ್ಟೇಬಸಪ್ಪ, ಸಂಘದ ರಾಜ್ಯಾಧ್ಯಕ್ಷ ಗುರುಮೂರ್ತಿ, ಈರಣ್ಣ, ಕೃಷ್ಣಮೂರ್ತಿ, ಸೋಮಶೇಖರ, ರಾಘವೇಂದ್ರ, ಶೇಷಗಿರಿ, ಉಮಾ ಮಹೇಶ್ವರ, ಸಂಗನಕಲ್ಲು ನಾಗರಾಜ, ನಾಗಲಕ್ಷ್ಮಿ, ಪಾರ್ವತಿ, ಸುಮಂಗಳಮ್ಮ ಮೊದಲಾದವರು ಇದ್ದರು.