ಅಗ್ರಹಾರ ಕೆರೆ ಏರಿ ಬಿರುಕು: ಜನರಲ್ಲಿ ಆತಂಕ

ಕೊರಟಗೆರೆ, ಜು. ೨೧- ತಾಲ್ಲೂಕಿನ ಅಗ್ರಹಾರದ ಕೆರೆ ಏರಿ ಬಿರುಕು ಬಿಟ್ಟಿದ್ದು, ಜನರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಯಾಗಿದೆ. ಅಗ್ರಹಾರ, ಜಂಪೇನಹಳ್ಳಿ ಸೇರಿದಂತೆ ಪಟ್ಟಣದ ಜನತೆಗೆ ಭಾರೀ ಗಂಡಾಂತರ ಕಾದಿದೆ. ಅಗ್ರಹಾರ ಜಂಪೇನಹಳ್ಳಿ ಭಾಗದ ರೈತರಿಗೆ ಸೇರಿದ ತೋಟಗಳೆಲ್ಲ ಸಂಪೂರ್ಣ ನಾಶವಾಗುವ ಆತಂಕ ಈ ಭಾಗದ ಜನರನ್ನು ಕಾಡುತ್ತಿದೆ.
ಪಟ್ಟಣದ ಶೇ.೯೦ ಭಾಗದಷ್ಟು ಜನರಿಗೆ ಕುಡಿಯುವ ನೀರಿನ ಮೂಲ ಮಾರ್ಗ ಅಗ್ರಹಾರದ ಕೆರೆ ಆಗಿದೆ. ಆದರೆ ಈ ಕೆರೆ ಏರಿ ಬಿರುಕು ಮೂಡಿರುವುದು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. ಕೆರೆಗಳ ಜವಾಬ್ದಾರಿ ಹೊತ್ತಿರುವ ಮೈನರ್ ಇರಿಗೇಶನ್ ಇಂಜಿನಿಯರ್‌ಗಳ ನಿರ್ಲಕ್ಷ್ಯತನ ಇದಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆರೆ ಏರಿ ಬಿರುಕು ಸುತ್ತಲೂ ಬೆಳೆದಿರುವ ದಟ್ಟ ಅರಣ್ಯದಿಂದಾಗಿ, ಗಿಡ ಮರಗಳಿಂದ ತುಂಬಿರುವ ಕೆರೆ ಏರಿ ಗಿಡ ಮರಗಳ ಬೇರಿನಿಂದ ಕೆರೆಯ ಏರಿ ಬಿರುಕು ಬಿಟ್ಟಿದೆ. ಕಂಡೂ ಕಾಣದಂತೆ ಇರುವ ಎಂಜಿನಿಯರ್‌ಗಳ ನಿರ್ಲಕ್ಷ್ಯತನ ಎಷ್ಟರ ಮಟ್ಟಿಗೆ ಸರಿ ಎಂದು ಸ್ಥಳೀಯ ಜನರು ಹಾಗೂ ರೈತರು ಪ್ರಶ್ನಿಸಿದ್ದಾರೆ.
ಎಷ್ಟು ಬಾರಿ ಸ್ಥಳೀಯರು ಅಧಿಕಾರಿಗಳಿಗೆ ದೂರು ಕೊಟ್ಟರೂ ಕೆರೆ ಬಗ್ಗೆ ತಲೆಕೆಡಿಸಿಕೊಳ್ಳದ ಪರಿಣಾಮ ಇಂದು ಕೆರೆಯ ಏರಿ ಬಿರುಕು ಬಿಟ್ಟು ಸಮಸ್ಯೆಗೆ ಕಾರಣವಾಗಿದೆ.
ಇನ್ನು ಇಂಜಿನಿಯರ್‌ಗಳು ಯಾವುದೇ ಅಧಿಕಾರಿಗಳ ಮಾತಿಗೂ ಬೆಲೆ ಕೊಡದೆ, ಸ್ಥಳೀಯರ ಮನವಿಗೂ ಮಣಿಯದಿರುವುದೇ ಈ ಘಟನೆಗೆ ಕಾರಣವಾಗಿದೆ.
ಕೆರೆ ಏರಿ ಒಡೆದರೆ ೪ ರಿಂದ ೫ ಗ್ರಾಮಗಳು ಸೇರಿದಂತೆ ಜನ ಜಾನುವಾರುಗಳು ಸಂಪೂರ್ಣ ನಾಶವಾಗುತ್ತವೆ. ಇದಕ್ಕೆಲ್ಲ ನೇರ ಹೊಣೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್‌ಗಳೇ ಆಗಿದ್ದಾರೆ. ತುಕ್ಕು ಹಿಡಿದಂತೆ ಕುಳಿತಿರುವ ಇಂಜಿನಿಯರುಗಳು ಎಷ್ಟು ಬಾರಿ ಮನವಿ ಕೊಟ್ಟರೂ, ಮೇಲಾಧಿಕಾರಿಗಳು ತಿಳಿಸಿದರೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸದೇ ಇರುವುದು ಅವರ ಕರ್ತವ್ಯ ನಿಷ್ಠೆಗೆ ಹಿಡಿಕ ಕನ್ನಡಿಯಾಗಿದೆ.
ಕೊರಟಗೆರೆ ತಾಲ್ಲೂಕು ತಹಶೀಲ್ದಾರ್ ನಹೀದಾ ಜಮ್ ಜಮ್ ಅವರು ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸಿದರೂ ಸ್ಥಳಕ್ಕೆ ಬಾರದ ಇಂಜಿನಿಯರ್‌ಗಳು ಈಗಲಾದರೂ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
೨೦೦೯ ರಲ್ಲಿ ಈ ಕೆರೆಯನ್ನು ಸಣ್ಣ ನೀರಾವರಿ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರಿಗಾಗಿ ಉಸ್ತುವಾರಿ ವಹಿಸಿಕೊಂಡರು. ಪ್ರಸ್ತುತ ಕೆರೆ ಏರಿ ೧೦ ರಿಂದ ೧೫ ಕಡೆ ಬಿರುಕು ಬಿಟ್ಟಿದೆ. ಹಾಗೂ ಕಾಡು ಪ್ರಾಣಿಗಳ ವಾಸ ಸ್ಥಳವಾಗಿದೆ. ಗಿಡ ಮರಗಳು ಬೆಳೆದು ನಿಂತು ದೊಡ್ಡ ಕಾಡಾಗಿ ಮಾರ್ಪಟ್ಟಿದೆ. ಈ ಕೆರೆ ಒಡೆದರೆ ೧೨೦೦ ಎಕರೆ ಜಮೀನು, ೧೫೦ ಎಕರೆ ಅಡಕೆ ತೋಟ ಸಂಪೂರ್ಣ ನೀರು ಪಾಲಾಗುತ್ತದೆ. ಅಲ್ಲದೆ ೪ ರಿಂದ ೫ ಊರಿನ ಗ್ರಾಮಸ್ಥರು ಹಾಗೂ ಜಾನುವಾರುಗಳು ನಿರಾಶ್ರಿತರಾಗುತ್ತಾರೆ. ೨೫ ಲಕ್ಷ ಟೆಂಡರ್ ಆಗಿದೆ ಎಂದರು. ಇವರು ಕೆಲಸ ಮಾಡಿಸುವುದು ಯಾವಾಗ ಎಂದರೆ ಈ ಕೆರೆ ಒಡೆದು ಸುತ್ತ ಮುತ್ತಲಿನ ಪ್ರದೇಶವೆಲ್ಲಾ ಕೊಚ್ಚಿ ಹೋದ ಮೇಲೆ. ಆಮೇಲೆ ರೈತರು ಬಂದು ನಮ್ಮ ಜಾಗವನ್ನು ಹುಡುಕಲು ೩ ರಿಂದ ೪ ವರ್ಷ ಆಗತ್ತೆ. ಅಧಿಕಾರಿಗಳಲ್ಲಿ ಮತ್ತೊಮ್ಮೆ ಬೇಡಿಕೊಳ್ಳುತ್ತೇನೆ ಈ ಕೆರೆ ಯಾವ ಇಲಾಖೆಗೆ ಬರತ್ತೋ ಅದು ನಮಗೆ ಗೊತ್ತಿಲ್ಲಾ. ಈಗಲಾದರೂ ಎಚ್ಚೆತ್ತು ರೈತರ ಜೀವನ ಹಾಳಾಗುವುದಕ್ಕಿಂತ ಮುಂಚೆ ಸರಿಯಾಗಿ ಕಾರ್ಯ ನಿರ್ವಹಿಸಿ. ಎಷ್ಟು ಮನವಿ ಸಲ್ಲಿಸಿದರೂ ಇಲ್ಲಿಗೆ ಯಾವ ಅಧಿಕಾರಿಯೂ ಬಂದಿಲ್ಲ. ತಹಶೀಲ್ದಾರ್ ಒಬ್ಬರು ಬಂದು ಹೋದರು ಅಷ್ಟೆ, ಇವರು ರೈತರೆಲ್ಲ ಸತ್ತ ಮೇಲೆ ಬರುತ್ತಾರೋ ಗೊತ್ತಿಲ್ಲ ಎಂದು ಸ್ಥಳೀಯ ಸುರೇಂದ್ರಬಾಬು ಹೇಳಿದ್ದಾರೆ.
ಇದು ಅಗ್ರಹಾರದ ಕೆರೆ ಎಂದೇ ಹೆಸರುವಾಸಿ. ಆದರೆ ಇದರಿಂದ ಯಾವುದೇ ಅನುಕೂಲವನ್ನು ನಾವು ಪಡೆದುಕೊಂಡಿಲ್ಲ. ಆದರೆ ಈಗ ಈ ಕೆರೆಯಿಂದ ಅನಾನುಕೂಲವಾಗುವ ಭಯ ಎದುರಾಗಿದೆ. ಕೆರೆ ಒಡೆದರೆ ಕೆಳ ಭಾಗದಲ್ಲಿರುವ ಎಲ್ಲಾ ಜನರು, ರೈತರ ಜಮೀನುಗಳು ಹಾಗೂ ಜಾನುವಾರುಗಳಿಗೆ ಬಹುಡೊಡ್ಡ ಅನಾಹುತವಾಗಲಿದೆ. ತಕ್ಷಣ ಸಂಬಂಧಪಟ್ಟ ಇಂಜಿನಿಯರ್‌ಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ವಿನಯ್‌ಕುಮಾರ್ ಆಗ್ರಹಿಸಿದ್ದಾರೆ.
ತಹಶೀಲ್ದಾರ್ ನಹೀದಾ ಜಮ್ ಜಮ್ ಮಾತನಾಡಿ, ಕೆರೆ ಸಮಸ್ಯೆ ಬಗ್ಗೆ ಇದೇ ತಿಂಗಳು ೮ ರಂದು ನಮಗೆ ಸಾರ್ವಜನಿಕರಿಂದ ದೂರು ಬಂದಿತು. ಅದೇ ದಿನ ಸಂಜೆ ನಮ್ಮ ಕಂದಾಯ ಅಧಿಕಾರಿಗಳೊಂದಿಗೆ ಹೋಗಿ ಸ್ಥಶ ಪರಿಶೀಲನೆ ನಡೆಸಿದಾಗ ಬಿರುಕು ಬಿಟ್ಟಿರುವುದು ಕಂಡು ಬಂದಿದೆ. ತಕ್ಷಣ ನಾನು ಎಂಐಇಡಬ್ಲ್ಯೂ ಮಾಹಿತಿ ಕಳಿಸಿದ್ದೇನೆ. ಮಾರನೇ ದಿನ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಇದು ಸಾರ್ವಜನಿಕರಿಗೆ ತಿಳಿದಿಲ್ಲ. ಈ ವಾರದಲ್ಲೇ ಒಂದು ಸಭೆಯನ್ನು ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಈಗಾಗಲೇ ಅಗ್ರಹಾರ ಕೆರೆಗೆ ಭೇಟಿ ನೀಡಿ ಪರಿಶೀಲಿಸಿ ಮೊದಲ ಹಂತದಲ್ಲಿ ಏರಿ ದುರಸ್ಥಿ ಮತ್ತು ನಿರ್ವಹಣೆಗೆ ೨೫ ಲಕ್ಷ ರೂ. ಹಣವನ್ನು ಇಲಾಖೆ ಬಿಡುಗಡೆಗೊಳಿಸಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ರಮೇಶ್ ತಿಳಿಸಿದ್ದಾರೆ.
ಕೆರೆ ನಿರ್ವಹಣೆಯನ್ನು ಸಣ್ಣ ನೀರಾವರಿ ಇಲಾಖೆ ನಿರ್ವಹಿಸುತ್ತಿದ್ದರೂ ಪ.ಪಂ. ಕುಡಿಯುವ ಘಟಕದ ನಿರ್ವಹಣೆ ಮಾಡುತ್ತಿದೆ. ಶೀಘ್ರದಲ್ಲಿ ನಮ್ಮ ಇಲಾಖೆ ಶ್ರಮದಾನ ಮಾಡಿ ಏರಿ ಅಚ್ಚುಕಟ್ಟುಗೊಳಿಸುವ ಕೆಲಸ ಮಾಡಲಾಗುವುದು, ಇನ್ನು ಮುಂದೆ ಸ್ವಚ್ಚತೆಗೆ ಹೆಚ್ಚು ಗಮನ ಹರಿಸುತ್ತೇವೆ ಎಂದು ಪ.ಪಂ. ಮುಖ್ಯಾಧಿಕಾರಿ ಭಾಗ್ಯಮ್ಮ ಹೇಳಿದ್ದಾರೆ.