ಅಗ್ನಿ ಬನ್ನಿರಾಯ ಜಯಂತಿ ಆಚರಣೆ

ಕೋಲಾರ, ಮಾ,೨೯-ಶ್ರಮ ಜೀವನಕ್ಕೆ ಹೆಸರಾಗಿರುವ ತಿಗಳ ಸಮುದಾಯಕ್ಕೆ ಗೌರವ ಸೂಚಿಸುವ ನಿಟ್ಟಿನಲ್ಲಿ ಅಗ್ನಿ ಬನ್ನಿರಾಯ ದಿನಾಚರಣೆಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿದೆ ಎಂದು ಕೋಲಾರ ತಾಲ್ಲೂಕು ತಹಶೀಲ್ದಾರ್ ಹರ್ಷವರ್ಧನ್ ಅವರು ತಿಳಿಸಿದರು.
ಇಂದು ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಅಗ್ನಿ ಬನ್ನಿರಾಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿ ಸರ್ಕಾರ ಆಯಾ ಸಮುದಾಯವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಸದೃಢರಾಗಬೇಕು ಮತ್ತು ಸಮಾಜದಲ್ಲಿ ಮುಂದೆ ಬರಬೇಕು ಎಂಬ ದೃಷ್ಟಿಯಲ್ಲಿಟ್ಟುಕೊಂಡು. ಪ್ರಸಕ್ತ ಸಾಲಿನಿಂದ ಶ್ರೀ ಅಗ್ನಿ ಬನ್ನಿರಾಯ ಜಯಂತಿಯನ್ನು ಆಚರಿಸಲು ಮುಂದಾಗಿದೆ. ಸಮುದಾಯದ ಮುಖಂಡರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕೆಂದು ತಿಳಿಸಿದರು.
ತೋಟಗಾರಿಕೆ ಕೆಲಸ ಮಾಡುವ ತಿಗಳ ಸೇರಿದಂತೆ ಕುಲಕಸುಬು ಮಾಡುವವರಿಗೆ ವಿಶೇಷ ಕಾರ್ಯಕ್ರಮ ರೂಪಿಸಿದ್ದು ಕಾಯಕ ಮಾಡುವ ಸಮುದಾಯದಿಂದ ದೇಶದ ಅಭಿವೃದ್ಧಿ ಸಾಧ್ಯ, ಹಣಕ್ಕೆ ಮಹತ್ವ ಇಲ್ಲ, ದುಡಿಮೆಗೆ ಮಹತ್ವ ಎಂದರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಎನ್ ಆರ್ ಜ್ಞಾನಮೂರ್ತಿ ಇವರು ವಿಶೇಷ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್‌ರೆಡ್ಡಿ, ಸಮುದಾಯದ ಮುಖಂಡರಾದ ರಾಜೇಶ್ ಸಿಂಗ್, ಮಂಜುನಾಥ್, ಪಾಲ್ಗುಣ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.