ಅಗ್ನಿ ದುರಂತ 18 ಕೋವಿಡ್ ರೋಗಿಗಳ ಸಾವು

ಬರೂಚ್. ಮೇ ೧- ಗುಜರಾತ್‌ನ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ೧೮ ಮಂದಿ ಸುಟ್ಟು ಕರಕಲಾಗಿದ್ದಾರೆ.
ಒಂದೆಡೆ ಕೊರೊನಾ ದೇಶದಲ್ಲಿ ಆರ್ಭಟಿಸಿ ಸೋಂಕಿತರಿಗೆ ಹಾಸಿಗೆ, ಆಕ್ಸಿಜನ್ ಸಿಗದೆ ನರಳಾಡುತ್ತಿದ್ದರೆ, ಆಗ್ಗಿಂದ್ದಾಗ್ಗೆ ಆಸ್ಪತ್ರೆಗಳಲ್ಲಿ ಬೆಂಕಿ ಅವಘಡ ಸಂಭವಿಸುತ್ತಿರುವುದು ಗಾಯದ ಮೇಲೆ ಬರೆ ಎಳೆದಿದೆ.
ಮುಂಬೈನ ಖಾಸಗಿ ಆಸ್ಪತ್ರೆಯಲ್ಲೂ ಅಗ್ನಿ ದುರಂತ ಸಂಭವಿಸಿದ್ದರ ಬೆನ್ನಲ್ಲೇ ಗುಜರಾತ್‌ನಲ್ಲೂ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ ಸಂಭವಿಸಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಗುಜರಾತಿನ ಅಹ್ಮದಾಬಾದ್‌ನಿಂದ ಸುಮಾರು ೧೯೦ ಕಿಮೀ ದೂರದಲ್ಲಿರುವ ಕೋವಿಡ್ ಚಿಕಿತ್ಸಾ ಆಸ್ಪತ್ರೆಯಲ್ಲಿ ಇಂದು ಅಗ್ನಿ ದುರಂತ ೧೮ ಮಂದಿಯನ್ನು ಬಲಿ ತೆಗೆದುಕೊಂಡಿದೆ.
ಹಾಸಿಗೆ ಮತ್ತು ಸ್ಟ್ರೆಚರ್‌ಗಳಲ್ಲೇ ಕೋವಿಡ್ ರೋಗಿಗಳು ಸುಟ್ಟು ಕರಕಲಾಗಿರುವ ಹೃದಯ ವಿದ್ರಾವಕ ದೃಶ್ಯಗಳು ಮನ ಕಲುಕುತ್ತಿವೆ. ನಾಲ್ಕು ಮಹಡಿಗಳ ವೆಲ್ಫೇರ್ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಬಳಿಕ ದುರ್ಘಟನೆ ಸಂಭವಿಸಿದಾಗ ೫೦ ಮಂದಿ ಇತರ ರೋಗಿಗಳೂ ಇದ್ದರು ಎಂದು ತಿಳಿದು ಬಂದಿದೆ. ಅವರನ್ನು ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದರಿಂದ ಸಂಭವಿಸಬಹುದಾಗಿದ್ದ ಸಾವು – ನೋವು ತಪ್ಪಿದಂತಾಗಿದೆ.
“ಮುಂಜಾನೆ ೬.೩೦ಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ, ಘಟನೆಯಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ ೧೮. ಘಟನೆ ನಡೆದ ತಕ್ಷಣ ೧೨ ಮಂದಿ ಮೃತಪಟ್ಟಿರುವುದು ದೃಢಪಟ್ಟಿತ್ತು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೋವಿಡ್-೧೯ ಚಿಕಿತ್ಸಾ ಘಟಕದಲ್ಲಿದ್ದ ೧೨ ಮಂದಿ ರೋಗಿಗಳು ಬೆಂಕಿ ಮತ್ತು ತೀವ್ರ ಹೊಗೆಯಿಂದ ಉಸಿರುಕಟ್ಟಿ ಮೃತಪಟ್ಟಿದ್ದಾರೆ ಎಂದು ಬರೂಚ್ ಎಸ್ಪಿ ರಾಜೇಂದ್ರ ಸಿಂಗ್ ಚೂಡಾಸಮ ವಿವರ ನೀಡಿದ್ದಾರೆ.
ಇತರ ಆರು ಮಂದಿ ವೆಲ್ಫೇರ್ ಆಸ್ಪತ್ರೆಯಲ್ಲೇ ಜೀವ ಕಳೆದುಕೊಂಡಿದ್ದಾರೆಯೇ ಅಥವಾ ಇತರ ಆಸ್ಪತ್ರೆಗಳಿಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆಯೇ ಎನ್ನುವುದು ಖಚಿತವಾಗಿಲ್ಲ. ತಮ್ಮವರನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿದೆ.
ಬರೂಚ್- ಜಮ್‌ಬೂಸರ್ ಹೆದ್ದಾರಿಯ ಪಕ್ಕದಲ್ಲಿ ಈ ಆಸ್ಪತ್ರೆ ಇದೆ. ಬೆಂಕಿ ಆಕಸ್ಮಿಕಕ್ಕೆ ಕಾರಣ ತಿಳಿದುಬಂದಿಲ್ಲ. ಒಂದು ಗಂಟೆಯ ಒಳಗಾಗಿ ಬೆಂಕಿ ನಂದಿಸಲಾಗಿದ್ದು, ೫೦ ರೋಗಿಗಳನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆಯಿಂದಷ್ಟೇ ಮಾಹಿತಿ ತಿಳಿಯಲಿದೆ. ಮೂಲಗಳ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಈ ದುರಂತ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.