ಅಗ್ನಿ ದುರಂತ 10 ಶಿಶುಗಳ ಸಜೀವ ದಹನ

ಮುಂಬೈ,ಜ.೯- ಮಹಾರಾಷ್ಟ್ರದ ಭಂಡಾರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ೧೦ ನವಜಾತ ಶಿಶುಗಳು ಸಜೀವ ದಹನವಾಗಿರುವ ಮನಕಲಕುವ ಘಟನೆ ಸಂಭವಿಸಿದೆ.
ತಡರಾತ್ರಿ ಆಸ್ಪತ್ರೆಯಲ್ಲಿ ಕಾಯಿಲೆಯಿಂದ ಬಳಲುತ್ತಿದ್ದ ಮಕ್ಕಳನ್ನು ಮಲಗಿಸಿದ್ದ ವಾರ್ಡ್‌ನಲ್ಲಿ ಏಕಾಏಕಿ ಅಗ್ನಿ ಅವಘಡ ಸಂಭವಿಸಿದಾಗ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಘಟಕಕ್ಕೆ ಆವರಿಸಿ ಧಗಧಗನೆ ಹೊತ್ತಿ ಉರಿದಿದೆ. ೧೭ ಮಕ್ಕಳ ಪೈಕಿ ೭ ಮಕ್ಕಳನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಸಫಲವಾಗಿದೆ.
ತಮ್ಮ ಮಕ್ಕಳನ್ನು ಕಳೆದುಕೊಂಡ ತಾಯಂದಿರ ರೋಧನ ಮುಗಿಲು ಮುಟ್ಟಿದೆ. ಆದರೆ, ಆಗ್ನಿ ಅವಘಡ ಹೇಗೆ ಸಂಭವಿಸಿತು ಎಂಬ ಬಗ್ಗೆ ನಿಖರ ಮಾಹಿತಿಗಳು ಲಭ್ಯವಾಗಿಲ್ಲ. ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಆಸ್ಪತ್ರೆಯ ಹಿರಿಯ ವೈದ್ಯ ಡಾ. ಪ್ರಮೋದ್ ಕಂಡಾಟೆ ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿ ೧೭ ಮಕ್ಕಳು ಹೊಸದಾಗಿ ಜನಿಸಿದ ಘಟಕದಲ್ಲಿ ದಾಖಲಿಸಲಾಗಿತ್ತು. ಈ ಘಟಕದಲ್ಲಿ ತಡರಾತ್ರಿ ಹೊಗೆ ಬರುವುದನ್ನು ನರ್ಸ್‌ಗಳು ಗಮನಿಸಿದ್ದಾರೆ. ತಕ್ಷಣವೇ ವೈದ್ಯರಿಗೆ ತಿಳಿಸಲಾಯಿತು. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ವೈದ್ಯರು ಘಟಕದಲ್ಲಿದ್ದ ಕಂದಮ್ಮಗಳನ್ನು ರಕ್ಷಿಸಲು ಪ್ರಯತ್ನ ಮಾಡಿದರು. ಆದರೆ, ಪರಿಸ್ಥಿತಿ ಕೈ ಮೀರಿದ್ದರಿಂದ ೭ ಹಸುಳೆಗಳನ್ನು ಮಾತ್ರ ರಕ್ಷಿಸುವಲ್ಲಿ ಸಾಧ್ಯವಾಯಿತು ಎಂದು ಹೇಳಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ಠಾಕ್ರೆ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಆರೋಗ್ಯ ಸಚಿವ ರಾಜೇಶ್‌ಟೊಪೆ ಅವರೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಅವಘಡ ಸಂಭವಿಸಿರುವುದು ನಿಜಕ್ಕೂ ದುರದೃಷ್ಟಕರ. ಈ ಘಟನೆ ಬಗ್ಗೆ ನೋವನ್ನು ವ್ಯಕ್ತಪಡಿಸಲು ಪದಗಳೇ ಇಲ್ಲ. ತಮ್ಮ ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಭಂಡಾರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಅಮಾಯಕ ಮಕ್ಕಳು ಸಾವನ್ನಪ್ಪಿದ್ದಾರೆ. ತಮ್ಮ ಮಕ್ಕಳನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿರುವ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಭಂಡಾರ ಜಿಲ್ಲಾಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ.

೧೦ ನವಜಾತ ಶಿಶುಗಳು ಸಜೀವ ದಹನ.

೭ ಕಂದಮ್ಮಗಳು ಪ್ರಾಣಾಪಾಯದಿಂದ ಪಾರು.

ಶಾರ್ಟ್‌ಸರ್ಕ್ಯೂಟ್‌ನಿಂದ ಅವಘಡ.

ತನಿಖೆಗೆ ಸಿಎಂ ಉದ್ಧವ್‌ಠಾಕ್ರೆ ಆದೇಶ.

ಪ್ರಧಾನಿ ಸೇರಿ ಗಣ್ಯರ ತೀವ್ರ ಸಂತಾಪ.

ಮೋದಿ ಸಂತಾಪ
ಮಹಾರಾಷ್ಟ್ರದ ಭಂಡಾರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ೧೦ ನವಜಾತ ಶಿಶುಗಳು ಮೃತಪಟ್ಟಿರುವುದಕ್ಕೆ ಪ್ರಧಾನಿ ನರೇಂದ್ರಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಅವಘಡದಲ್ಲಿ ಅಮೂಲ್ಯವಾದ ಮುಗ್ದ ಜೀವಿಳನ್ನು ಕಳೆದುಕೊಂಡಿದ್ದೇವೆ. ತಮ್ಮ ಶಿಶುಗಳನ್ನು ಕಳೆದುಕೊಂಡಿರುವ ದುಃಖದಲ್ಲಿರುವ ಕುಟುಂಬಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

೫ ಲಕ್ಷ ರೂ. ಪರಿಹಾರ
ತಡರಾತ್ರಿ ಭಂಡಾರ ಆಸ್ಪತ್ರೆಯಲ್ಲಿ ದುರಂತ ಸಾವಿಗೀಡಾದ ೧೦ ಶಿಶುಗಳ ಕುಟುಂಬ ಸದಸ್ಯರಿಗೆ ತಲಾ ೫ ಲಕ್ಷ ರೂ. ಪರಿಹಾರ ಪ್ರಕಟಿಸಲಾಗಿದೆ ಎಂದು ಮಹಾರಾಷ್ಟ್ರ ಅರೋಗ್ಯ ಸಚಿವ ರಾಜೇಶ್ ಟೊಪೆ ತಿಳಿಸಿದ್ದಾರೆ.
೧೭ ಮಕ್ಕಳಲ್ಲಿ ೭ ಶಿಶುಗಳನ್ನು ಆಸ್ಪತ್ರೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಈಗಾಗಲೇ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಘಟನೆಯಲ್ಲಿ ಮೂರು ಶಿಶುಗಳು ಸುಟ್ಟ ಗಾಯಗಳಿಂದಾಗಿ ಮತ್ತು ೭ ಮಕ್ಕಳು ದಟ್ಟ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿವೆ ಎಂದು ಹೇಳಿದ್ದಾರೆ.