ಅಗ್ನಿ ಅವಘಡ; ಹೊತ್ತಿ ಉರಿದ ಹೊಟೇಲ್

ದಾವಣಗೆರೆ.ಜ.೮;  ಅಗ್ನಿ ಅವಘಡದಿಂದಾಗಿ ಕೇವಲ 20 ದಿನಗಳ ಹಿಂದಷ್ಟೇ ಆರಂಭವಾಗಿದ್ದ ಹೋಟೆಲ್‌ವೊಂದು ಹೊತ್ತಿ ಉರಿದ ಘಟನೆ ನಗರದ ರಿಂಗ್ ರಸ್ತೆಯ ಆಫೀರ‍್ಸ್ ಕ್ಲಬ್ ಎದುರು ನಡೆದಿದೆ.ಮಿಥುನ್ ಎಂಬುವರಿಗೆ ಸೇರಿದ ಗೋಲ್ಡನ್ ಸ್ಪೂನ್ ಹೋಟೆಲ್‌ನಲ್ಲಿ  ಕಾಣಿಸಿಕೊಂಡ ಬೆಂಕಿಯ ಕಿಡಿ ಹೋಟೆಲ್ ತುಂಬ ವ್ಯಾಪಿಸಿರುವ ಪರಿಣಾಮ ಹೋಟೆಲ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಹೊಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಕೆಲ ಕ್ಷಣದಲ್ಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ಹೊಟೆಲ್‌ನ ಬೀಗವನ್ನು ಮುರಿದು ಒಳಗೆ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ರು. ಮೌಲ್ಯದ ಪೀಠೋಪಕರಣ, ಇತರೆ ವಸ್ತುಗಳು ಸುಟ್ಟು ಕರಕಲಾಗಿದೆ. ವಿದ್ಯಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಬೆಂಕಿ ಅವಘಡದಿಂದಾಗಿ ದೂರದ ವರೆಗೂ ದಟ್ಟ ಕಪ್ಪು ಹೊಗೆ ಯುಗುಳುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.