ಅಗ್ನಿ ಅವಘಡ ಸ್ಥಳಕ್ಕೆ ಶಾಸಕ ಸುಭಾಷ್ ಗುತ್ತೇದಾರ ಭೇಟಿ

ಆಳಂದ:ಎ.9: ತಾಲೂಕಿನ ಹೊದಲೂರ ಗ್ರಾಮದಲ್ಲಿ ಬುಧುವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡ ದುರಂತದ ಸ್ಥಳಕ್ಕೆ ಶಾಸಕ ಸುಭಾಷ್ ಆರ್ ಗುತ್ತೇದಾರ ಭೇಟಿ ನೀಡಿ ಪರಿಶೀಲಿಸಿದರು.

ಹೊದಲೂರ ಗ್ರಾಮದ ಚಂದ್ರಕಾಂತ ಸಾಯಬಣ್ಣ ಬನಶೆಟ್ಟಿ ಎಂಬುವರಿಗೆ ಸೇರಿದ ಹೊಲದಲ್ಲಿ ರಾತ್ರಿ ಅಚಾನಕ್ಕಾಗಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ನೋಡ ನೋಡುತ್ತಲೆ ಪೂರ್ತಿ ಹೊಲವನ್ನು ಆವರಿಸಿಕೊಂಡಿರುವುದರಿಂದ ಹೊಲದಲ್ಲಿದ್ದ ಬಣಿವೆ, ಕೊಂಪೆ ಸುಟ್ಟು ಕರಕಲಾಗಿವೆ. 4 ಆಕಳುಗಳು ಸಾವಿಗೀಡಾಗಿವೆ. ಎರಡು ಇಂಜಿನ್, 1 ಮೋಟರ್ ಸೈಕಲ್, 50 ಪತ್ರಾ, ಕ್ರಿಚರ್ ಮಶೀನ್, ಬೆಲ್ಲದ 4 ಸಾವಿರ ಮುದ್ದೆ, ಸೇರಿದಂತೆ ಇತರೆ ವಸ್ತುಗಳು ಸುಟ್ಟು ಕರಕಲಾಗಿ ಸುಮಾರು 15 ಲಕ್ಷ ರೂ. ಮೌಲ್ಯದ ನಷ್ಟ ಉಂಟಾಗಿದೆ.

ಜೆಸ್ಕಾಂ ಇಲಾಖೆ ಮತ್ತು ಅಗ್ನಿ ಶಾಮಕ ಇಲಾಖೆಯವರು ಸಮಯಕ್ಕೆ ಸರಿಯಾಗಿ ಸ್ಪಂದಿಸದೇ ಇರುವುದರಿಂದ ಇಷ್ಟೊಂದು ಪ್ರಮಾಣದ ಹಾನಿಯಾಗಿದೆ ಒಂದು ವೇಳೆ ಆ ಎರಡು ಇಲಾಖೆಗಳು ಸ್ಪಂದಿಸುತ್ತಿದ್ದರೇ ಹೆಚ್ಚಿನ ಪ್ರಮಾಣದ ಹಾನಿಯನ್ನು ತಡೆಯಬಹುದಿತ್ತು ಎನ್ನುತ್ತಾರೆ ಗ್ರಾಮಸ್ಥರು. ಎರಡು ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮಕೈಗೊಂಡು ಅವರನ್ನು ಅಮಾನತ್ತು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಶಾಸಕ ಸುಭಾಷ್ ಆರ್ ಗುತ್ತೇದಾರ ವೈಯಕ್ತಿಕ ಪರಿಹಾರ ನೀಡಿ ಮಾತನಾಡಿ, ರೈತ ಚಂದ್ರಕಾಂತ ಅವರಿಗೆ ಅಪಾರ ಪ್ರಮಾಣದ ಹಾನಿಯಾಗಿದೆ ಸದರಿ ಸರ್ಕಾರದ ನಿಯಮಾವಳಿಯಂತೆ ಎಲ್ಲವನ್ನು ಕಳೆದುಕೊಂಡಿರುವ ರೈತನಿಗೆ ಶೀಘ್ರ ಪರಿಹಾರ ವಿತರಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಇನ್ನೂ ಹೆಚ್ಚಿನ ಪರಿಹಾರ ಧನ ಮಂಜೂರು ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಿ ರೈತನಿಗೆ ನ್ಯಾಯ ಕೋಡಿಸುತ್ತೇವೆ ಎಂದು ಹೇಳಿದರು.

ಭೇಟಿಯ ಸಂದರ್ಭದಲ್ಲಿ ಸಹಾಯಕ ಆಯುಕ್ತ ರಾಮಚಂದ್ರ ಗಡದೆ, ತಹಸೀಲದಾರ ಯಲ್ಲಪ್ಪ ಸುಬೇದಾರ, ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಕಂದಾಯ ನಿರೀಕ್ಷಕ ಅಲ್ಲಾವುದ್ದೀನ, ಪಿಡಿಒ ನಾಗೇಶಮೂರ್ತಿ, ತಾ.ಪಂ ಉಪಾಧ್ಯಕ್ಷ ಗುರು ಪಾಟೀಲ, ಮುಖಂಡರಾದ ಸಿದ್ದು ಬನಶೆಟ್ಟಿ, ಮಲ್ಲಿಕಾರ್ಜುನ ಕಂದಗೂಳೆ, ವೀರಭದ್ರ ಖೂನೆ, ಶ್ರೀಶೈಲ ಬನಶೆಟ್ಟಿ, ಭೀಮಾಶಂಕರ ಕಲಶೆಟ್ಟಿ ಸೇರಿದಂತೆ ಇತರರು ಇದ್ದರು.