ಅಗ್ನಿಹೋತ್ರದಿಂದ ಹತ್ತಾರು ಲಾಭಗಳು : ಕಿರಣ್‌ ಕುಮಾರ್

ಕೂಡ್ಲಿಗಿ.ನ.12:- ಪ್ರತಿಯೊಬ್ಬರು ನಿತ್ಯ ಕನಿಷ್ಟ ಪಕ್ಷ ಐದರಿಂದ ಐದಿನೈದು ನಿಮಿಷ ಅಗ್ನಿಹೋತ್ರ ಮಾಡಿದರೆ ವೈಯುಕ್ತಿಕ ಮತ್ತು ಪ್ರಾಕೃತಿಕವಾಗಿ ಅನೇಕ ಲಾಭಗಳಿದ್ದು ನಮ್ಮ ಸುತ್ತಲಿನ ವಾತಾವರಣ ಅದರಲ್ಲೂ ವಿಶೇಷವಾಗಿ ವಾಯು ಶುದ್ಧಗೊಳ್ಳುವಲ್ಲಿ ಹಾಗೂ ನಮ್ಮ ಆರೋಗ್ಯ ಸುಸ್ಥಿತಿಯಲ್ಲಿಡಲು ಅಗ್ನಿಹೋತ್ರ ನಿತ್ಯ ಮಾಡುವುದು ಒಳ್ಳೆಯದು ಎಂದು ಪತಂಜಲಿ ಯೋಗ ಪರಿವಾರದ ರಾಜ್ಯ ಯುವ ಪ್ರಭಾರಿ ಕಿರಣ್‌ ಕುಮಾರ್‌ ತಿಳಿಸಿದರು. ಅವರು ಪಟ್ಟಣದ ಯೋಗ ಸಾಧಕರಾದ ಚನ್ನಶೇಖರ ಇವರ ಮನೆಯಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಅಗ್ನಿಹೋತ್ರ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. ಅಗ್ನಿಹೋತ್ರ ನಾವಿರುವ ಪರಿಸರವನ್ನು ಸುಗಂಧಿತ, ಪುಷ್ಠಿದಾಯವಾಗಿಡುವುದರ ಜೊತೆಗೆ ನಮ್ಮಗಳ ಆರೋಗ್ಯ ಚೇತರಿಕೆ ಆಗುತ್ತದೆ. ನಮ್ಮ ಶರೀರದ ಬಲ ವರ್ಧನೆ ಮತ್ತು ಸದಾ ಮನಸ್ಸು ಉಲ್ಲಾಸದಿಂದ ಇರಲು ಸಾಧ್ಯವಾಗುತ್ತೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದ್ದು, ಇದರ ವಿವಿಧ ಪ್ರಯೋಜನಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು. ಎಲ್ಲರೂ ಇದರ ಮಹತ್ವ ಅರಿತು ಈ ಸರಳ ಹೋಮ ಪದ್ಧತಿ ಅಗ್ನಿಹೋತ್ರ ಮಾಡುವುದನ್ನು ನಿಮ್ಮ ಜೀವನದ ಭಾಗ ಮಾಡಿಕೊಳ್ಳಿ ಎಂದು ಕರೆ ನೀಡಿದರು. ಈ ವೇಳೆ ಯೋಗ ಸಾಧಕರಾದ ಸುಮಾ, ರಜತ್‌ ಕುಮಾರ್‌, ಚಿನ್ಮಯಿ, ತೇಜಸ್‌, ಸ್ವರೂಪ್‌ ಕೊಟ್ಟೂರು, ಮಹಂತಪ್ಪ, ಕೊಟ್ರೇಶ್‌ ಮುಂತಾದವರು ಇದ್ದರು.

ವೇಸ್ಟ್ ಕವರ್‌ ಬಳಸಿ ಹಸಿರ ಕೈತೋಟ…!
ಚನ್ನಶೇಖರ ಇವರದ್ದು ಪತಂಜಲಿ ಉತ್ಪನ್ನಗಳ ಮಾರಾಟ ಮಳಿಗೆ ಇದೆ. ಸಹಜವಾಗಿ ಉತ್ಪನ್ನಗಳ ಖಾಲಿ ಡಬ್ಬ, ಕವರ್‌ ಸಿಗುತ್ತವೆ. ಇವುಗಳನ್ನು ಬಿಸಾಡದೇ ಅವುಗಳಲ್ಲಿ ಹೂವಿನ, ಅಲಂಕಾರಿಕ ಗಿಡಗಳನ್ನು ಬೆಳೆಸುತ್ತಿದ್ದಾರೆ. ಹೀಗೆ ಬೆಳೆಸಿದ ಗಿಡಗಳು ಇವರ ಮನೆಯ ವಿಶೇಷ ಆಕರ್ಷಣೀಯ ಕೇಂದ್ರ ಆಗಿದೆ. ʻ ಖಾಲಿ ಡಬ್ಬ, ಕವರ್‌ ಗಳನ್ನು ಬಿಸಾಡಲು ಮನಸ್ಸು ಆಗಲಿಲ್ಲ. ಇವುಗಳನ್ನು ಜೋಡಿಸಿಟ್ಟು ಅವುಗಳ ಗಾತ್ರದ ಅನುಸಾರವಾಗಿ ಮಣ್ಣು ತುಂಬಿ, ಅದರಲ್ಲಿ ಸಸಿಗಳನ್ನು ಹಾಕುತ್ತಿರುವೆ. ಇದರಿಂದ ಕೈತೋಟ ಮತ್ತಷ್ಟು ಅಂದವಾಗುತ್ತಿರುವುದರ ಜೊತೆಗೆ ಮನಸ್ಸಿಗೆ ಮುದ ಸಿಗುತ್ತಿದೆ..ʼ ಎನ್ನುತ್ತಾರೆ ಚನ್ನಶೇಖರ ಇವರ ಧರ್ಮಪತ್ನಿ ಸುಮಾ.