ಅಗ್ನಿಶಾಮಕ ದಳ ಆಧುನೀಕರಣಕ್ಕೆ ಕ್ರಮ: ಪರಂ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೧೯- ಅಗ್ನಿ ಅವಘಡಗಳಲ್ಲಿ ಜೀವ ಮತ್ತು ಜೀವನ ಕಾಪಾಡುವ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಅಗ್ನಿಶಾಮಕ ದಳದ ಆಧುನೀಕರಣ ಮಾಡಲಾಗುವುದು. ಇದು ನಿರಂತರ ಪ್ರಕ್ರಿಯೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಧಾನ ಪರಿಷತ್ತಿನಲ್ಲಿಂದು ತಿಳಿಸಿದರು.
ರಾಜ್ಯದಲ್ಲಿ ಅಗ್ನಿಶಾಮಕ ದಳದ ಪರವಾನಗಿ ಪಡೆಯದೆ ನಿಯಮ ಉಲ್ಲಂಘಿಸಿರುವ ೧೯,೨೯೪ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಒಂದರಲ್ಲೇ ೧೫,೯೨೪ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಪರವಾನಗಿ ಪಡೆಯುವ ನಿಯಮಗಳನ್ನು ಸರಳೀಕರಣ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ಅಂಗೀಕಾರ ರೂಪದಲ್ಲಿದ್ದ ಕರ್ನಾಟಕ ಅಗ್ನಿಶಾಮಕ ದಳ ತಿದ್ದುಪಡಿ ವಿಧೇಯಕ-೨೦೨೩ನ್ನು ಸದನದಲ್ಲಿ ಮಂಡಿಸಿ ಸದಸ್ಯರ ಚರ್ಚೆ, ಸಲಹೆ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಅಗ್ನಿ ಅವಘಡಗಳ ಸಂದರ್ಭದಲ್ಲಿ ಜನರ ಜೀವ ಉಳಿಸಲು ಬೇಕಾಗುವ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಎತ್ತರದ ಕಟ್ಟಡಗಳಿಗೆ ಅಗ್ನಿಶಾಮಕ ದಳದ ಅನುಮತಿ ಪಡೆಯುವ ಅಧಿಕಾರ ಸರ್ಕಾರದಲ್ಲಿದ್ದು, ಅದನ್ನು ಪೊಲೀಸ್ ಮಹಾನಿರ್ದೇಶಕರ ಹಂತಕ್ಕೆ ತರಲು ನಿರ್ಧರಿಸಲಾಗಿದೆ. ಕಡಿಮೆ ಹಂತದ ಕಟ್ಟಡಗಳಿಗೆ ಜಿಲ್ಲಾ ಮಟ್ಟದಲ್ಲಿ ಅನುಮತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಪದೇ ಪದೇ ನಿಯಮ ಉಲ್ಲಂಘನೆಯಾಗುವುದನ್ನು ತಪ್ಪಿಸಲು ಹಾಗೂ ಪರದಾಟ ಮಾಡುವುದನ್ನು ತಡೆಯಲು ವಿಧೇಯಕವನ್ನು ತರಲಾಗಿದೆ ಎಂದು ಹೇಳಿದರು.
ಐಟಿ ಕಂಪೆನಿಗಳು ಕಟ್ಟಡ ನಿರ್ಮಿಸುವ ವೇಳೆ ಅಗ್ನಿಶಾಮಕ ದಳದ ಪರವಾನಗಿ ಸಿಗದೆ ಪರದಾಡುವುದು ಸೇರಿದಂತೆ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ವಿವಿಧ ಭಾಗಗಳಲ್ಲಿ ಅತಿ ಎತ್ತರದ ಕಟ್ಟಡಗಳಿಗೆ ಪರವಾನಗಿ ಪಡೆಯಲು ಇದ್ದ ಅಡೆತಡೆಗಳನ್ನು ನಿವಾರಿಸಲು ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದರು.
ಶಾಲಾ-ಕಾಲೇಜು ಸೇರಿದಂತೆ ಕಡಿಮೆ ಎತ್ತರದ ಕಟ್ಟಡಗಳಿಗೆ ಜಿಲ್ಲಾ ಮಟ್ಟದಲ್ಲೇ ಅಗ್ನಿಶಾಮಕ ದಳದ ಅನುಮತಿ ನೀಡಲಾಗುವುದು ಎಂದರು.
ಅಗ್ನಿ ಅವಘಡಗಳು ಆದ ಸಂದರ್ಭದಲ್ಲಿ ಅದನ್ನು ತಡೆಯಲು ಬೇಕಾದ ಅಗತ್ಯ ಸಲಕರಣೆಗಳು ಇಲಾಖಾ ಬಳಿ ಇದೆ. ೩೨ ಮೀಟರ್ ಎತ್ತರದ ಏಣಿ, ೫೪ ಮೀಟರ್ ಮತ್ತು ೯೦ ಮೀಟರ್ ಎತ್ತರದ ಏಣಿಗಳಿವೆ. ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಅವುಗಳನ್ನು ತಡೆಯಲು ಇನ್ನಿತರೆ ಪ್ರಕರಣಗಳು ಇವೆ. ಅಗ್ನಿಶಾಮಕ ಸಿಬ್ಬಂದಿಗೆ ಕಾಲಕಾಲಕ್ಕೆ ಶೂ, ಗ್ಲೌಸ್ ಸೇರಿದಂತೆ ಆಧುನೀಕರಣದ ಸಲಕರಣೆಗಳನ್ನು ನೀಡಲಾಗುತ್ತದೆ ಎಂದರು.
ಕಟ್ಟಡ ನಿರ್ಮಾಣದ ಸಮಯದಲ್ಲಿ ಎನ್‌ಓಸಿ ನೀಡುವಾಗ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಧ್ವನಿಮತದ ಅಂಗೀಕಾರ
ವಿಧಾನಸಭೆಯಿಂದ ಅಂಗೀಕಾರ ರೂಪದಲ್ಲಿದ್ದ ೨೦೨೩ನೇ ಸಾಲಿನ ಕರ್ನಾಟಕ ಅಗ್ನಿಶಾಮಕ ದಳ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ ಧ್ವನಿಮತದ ಅಂಗೀಕಾರ ನೀಡಿದೆ.
ವಿಧೇಯಕವನ್ನು ಮಂಡಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸದನ ಪರ್ಯಾಲೋಚಿಸಬೇಕು ಎಂದು ಮನವಿ ಮಾಡಿದರು.
ಈ ಹಂತದಲ್ಲಿ ಸದಸ್ಯರಾದ ತಿಪ್ಪೇಸ್ವಾಮಿ, ಕೇಶವಪ್ರಸಾದ್, ಡಿ.ಎಸ್. ಅರುಣ್, ತೇಜಸ್ವಿನಿಗೌಡ, ಮರಿತಿಬ್ಬೇಗೌಡ, ಎಸ್.ವಿ. ಸಂಕನೂರ್, ಅರವಿಂದಕುಮಾರ ಅರಳಿ, ರುದ್ರೇಗೌಡ ಮತ್ತು ಛಲವಾದಿ ನಾರಾಯಣಸ್ವಾಮಿ ಅವರು ತಿದ್ದುಪಡಿ ವಿಧೇಯಕ ಸ್ವಾಗತಿಸಿ, ಸರ್ಕಾರಕ್ಕೆ ಹಲವು ಸಲಹೆ, ಸೂಚನೆ ನೀಡಿದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಮಜಾಯಿಷಿ ನೀಡಿದ ನಂತರ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರೆಯಿತು.