ಅಗ್ನಿವೀರರಿಗೆ ಕೇಂದ್ರದ ಕೊಡುಗೆ ಬಿಎಸ್‌ಎಫ್‌ನಲ್ಲಿ ಶೇ. ೧೦ ಮೀಸಲಾತಿ

ದೆಹಲಿ,ಮಾ.೧೦-ಅಗ್ನಿವೀರರಾಗಿ ಸೇವೆ ಪೂರೈಸಿದ ಅಭ್ಯರ್ಥಿಗಳಿಗೆ ಗಡಿ ಭದ್ರತಾ ಪಡೆಯಲ್ಲಿ ಶೇ.೧೦ ಮೀಸಲಾತಿಯನ್ನು ಕೇಂದ್ರ ಸರ್ಕಾರ ಘೋಷಿಸುವ ಮೂಲಕ ಅಗ್ನಿವೀರರಿಗೆ ಮತ್ತೊಮ್ಮೆ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಕಲ್ಪಿಸಿದೆ.
ಅಗ್ನಿವೀರರು ಸೇವೆ ಪೂರೈಸಿದ ನಂತರ ಗಡಿ ಭದ್ರತಾ ಪಡೆಯಲ್ಲಿ ನೇಮಕಾತಿಗಾಗಿ ಶೇ.೧೦ ಮೀಸಲಾತಿಯನ್ನು ನೀಡುವುದರೊಂದಿಗೆ ದೈಹಿಕ ದಕ್ಷತೆಯ ಪರೀಕ್ಷೆಯಿಂದ ವಿನಾಯಿತಿಯನ್ನು ಸಹ ಘೋಷಿಸಿದೆ. ಕೇಂದ್ರ ಗೃಹ ಸಚಿವಾಲಯ ಈ ಸಂಬಂಧ ಮಾರ್ಚ್ ೬ ರಂದು ಅಧಿಸೂಚನೆ ಬಿಡುಗಡೆ ಮಾಡಿದೆ.
ಜಿಎಸ್‌ಆರ್ ೧೭೪ (ಇ) ಗಡಿ ಭದ್ರತಾ ಪಡೆ ಕಾಯಿದೆ ೧೯೬೮ರ ಸೆಕ್ಷನ್ ೧೪೧ರ (೧೯೬೮-೪೭) ಕಲಂ ಬಿ ಮತ್ತು ೬೦ ಸೆಕ್ಷನ್ ೨ರ ಮೂಲಕ ನೀಡಲಾದ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರ ಈ ನಿಯಮಗಳನ್ನು ಜಾರಿ ಮಾಡಿ ಗಡಿ ಭದ್ರತಾ ಪಡೆ ಜನರಲ್ ಡ್ಯೂಟಿ ಕೆಡರ್ ನೇಮಕಾತಿ ನಿಯಮಗಳ ತಿದ್ದುಪಡಿಗೆ ಅವಕಾಶ ಪಡೆದುಕೊಂಡಿದೆ.
ಈ ನೂತನ ನಿಯಮಗಳ ಪ್ರಕಾರ ಗಡಿ ಭದ್ರತಾ ಪಡೆ ಜನರಲ್ ಕೆಡರ್ ನೇಮಕಾತಿ ನಿಯಮಗಳು ೨೦೨೩ ಎಂದು ಕರೆಯಲಾಗಿದೆ. ಗಡಿ ಭದ್ರತಾ ಪಡೆಯಲ್ಲಿ ಅಗ್ನಿವೀರ್ ಸೇವೆ ಪೂರೈಸಿದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ದಿನಾಂಕದಿಂದ ನೇಮಕಾತಿಯಲ್ಲಿ ಮೀಸಲಾತಿಯನ್ನು ಪಡೆಯಬಹುದಾದ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.
ಈ ಅಧಿಸೂಚನೆ ಅನ್ವಯ ಅಗ್ನಿವೀರರಾಗಿ ಸೇವೆ ಸಲ್ಲಿಸಿದ ಮೊದಲ ಬ್ಯಾಚ್ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯ ೫ ವರ್ಷ ಸಡಿಲಿಕೆ ನೀಡಲಾಗಿದೆ. ನಂತರ ಗಡಿ ಭದ್ರತಾ ಪಡೆ ನೇಮಕಾತಿ ಬಯಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯನ್ನು ೩ ವರ್ಷ ಸಡಿಲಗೊಳಿಸಲಾಗುತ್ತದೆ. ಅಧಿಸೂಚನೆ ಅನ್ವಯ ಈ ನಿಯಮಗಳನ್ನು (ಐ ಕಲಂ) (೭)ರ ಷರತ್ತಿನ ಅನ್ವಯ ನೀಡಲಾಗಿದೆ.
ರಕ್ಷಣಾ ಸಚಿವಾಲಯದ ಉದ್ಯೋಗದಲ್ಲಿ ಅಗ್ನಿವೀರರಿಗೆ ಶೇ ೧೦ ರಷ್ಟು ಮೀಸಲಾತಿಯನ್ನು ಘೋಷಿಸಲಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೀರ ಪ್ರದೇಶದ ಭದ್ರತಾ ಪಡೆ ಮತ್ತು ರಕ್ಷಣಾ ನಾಗರಿಕ ಹುದ್ದೆಗಳ ಮೀಸಲಾತಿಯನ್ನು ಸಹ ಘೋಷಿಸಲಾಗಿದೆ. ಅಗತ್ಯ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಗ್ನೀವೀರರಿಗೆ ರಕ್ಷಣಾ ಸಚಿವಾಲಯದಲ್ಲಿ ಖಾಲಿ ಇರುವ ಉದ್ಯೋಗಗಳಲ್ಲಿ ಶೇ.೧೦ ರಷ್ಟು ಹುದ್ದೆಗಳನ್ನು ಕಾಯ್ದಿರಿಸುವ ಪ್ರಸ್ತಾವನೆಯನ್ನು ರಕ್ಷಣಾ ಸಚಿವರು ೨೦೨೨ ಜೂನ್ ೧೮ ರಂದು ಅನುಮೋದನೆಗೊಳಿಸಿದ್ದರು.
ಜೂನ್ ೧೪ ರಂದು ಅಗ್ನಿವೀರ್ ನೇಮಕಾತಿಗೆ ಘೋಷಣೆಯಾದ ನಂತರ ಅಗ್ನಿವೀರ್ ನೇಮಕಾತಿ ವಿರೋಧಿಸಿ ದೇಶಾದಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿದ್ದವು. ಇದರ ನಡುವೆಯೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಸ್ತಾವನೆಯನ್ನು ಅನುಮೋದಿಸಿದ್ದರು.
ಈ ನೇಮಕಾತಿಗೆ ಅಗತ್ಯವಿರುವ ತಿದ್ದುಪಡಿಗಳನ್ನು, ನಿಬಂಧನೆಗಳನ್ನು ಕೈಗೊಳ್ಳಲಾಗುವುದು ಎಂದು ರಕ್ಷಣಾ ಸಚಿವಾಲಯ ೨೦೦೨ರಲ್ಲೇ ಟ್ವೀಟ್ ಮೂಲಕ ತಿಳಿಸಿತ್ತು. ಹಾಗೂ ಉದ್ಯಮಗಳು ನೇಮಕಾತಿ ನಿಯಮಗಳಿಗೆ ತಿದ್ದುಪಡಿಗಳನ್ನು ತರಲಾಗುವುದು ಮತ್ತು ವಯಸ್ಸಿನ ಸಡಿಲಿಕೆಯನ್ನು ಮಾಡಲಾಗುವುದು ಎಂದು ಸಚಿವಾಯ ತಿಳಿಸಿತ್ತು.
ಮಾರ್ಚ್ ೬ ೨೦೨೩ರಂದು ಕೇಂದ್ರ ಗೃಹ ಸಚಿವಾಲಯ ಅರಸೇನಾ ಪಡೆಗಳು ಅಸ್ಸಾಂ ರೈಫಲ್ಸ್‌ನಲ್ಲಿ ಅಗ್ನಿವೀರರಿಗಾಗಿ ಶೇ.೧೦ರಷ್ಟು ಹುದ್ದೆಗಳ ಮೀಸಲಾತಿಯನ್ನು ಪ್ರಕಟಿಸಿದೆ. ಜೊತೆಗೆ ಗರಿಷ್ಠ ವಯಸ್ಸಿನ ಮಿತಿಯನ್ನು ೩ ವರ್ಷಗಳ ಸಡಿಲಿಕೆಯನ್ನು ಸಹ ಪ್ರಕಟಿಸಿದೆ.
ಅಗ್ನಿಪಥ್ ಯೋಜನೆಯನ್ನು ಅನಾವರಣಗೊಳಿಸಿದ ಸರ್ಕಾರ ೧೭ ಮತ್ತು ೨೧ ವಯಸ್ಸಿನ ಯುವಕರನ್ನು ೪ ವರ್ಷಗಳ ಅವಧಿಗೆ ಸೇರ್ಪಡೆಗೊಳಿಸಲಾಗುವುದು ಮತ್ತು ೨೫ ಪ್ರತಿಶತ ನೇಮಕಾತಿಗಳನ್ನು ನಿಯಮಿತ ಸೇವೆಗಳಿಗೆ ಉಳಿಸಿಕೊಳ್ಳಲಾಗುವುದು ಎಂದು ಹೇಳಿತ್ತು. ಈ ಹೊಸ ಯೋಜನೆಯಡಿ ನೇಮಕಗೊಳ್ಳುವ ಯುವಕರನ್ನು ಅಗ್ನಿವೀರ್ ಎಂದು ನಾಮಕರಣ ಮಾಡಲಾಯಿತು. ದೇಶದ ವಿವಿಧ ಭಾಗಗಳಲ್ಲಿ ಸೇನೆ,ನೌಕಪಡೆ ಮತ್ತು ವಾಯುಪಡೆ ಸೇರ್ಪಡೆಗಾಗಿ ಸೇನಾ ನೇಮಕಾತಿ ನಿಯಮಕ್ಕೆ ಹೊಸ ತಿದ್ದುಪಡಿ ತರಲಾಗಿತ್ತು.

ಅಗ್ನಿವೀರರಿಗೆ ಬಿಎಸ್‌ಎಫ್‌ನಲ್ಲಿ ಶೇ.೧೦ ಮೀಸಲಾತಿ
ಮೊದಲ ಬ್ಯಾಚ್‌ಗೆ ೫ ವರ್ಷ ವಯೋಮಿತಿ ಸಡಿಲಿಕೆ
ಮಾರ್ಚ್ ೬ ಗೃಹ ಸಚಿವಾಲಯದಿಂದ ಅಧಿಸೂಚನೆ ಬಿಡುಗಡೆ
ಗೃಹ ಸಚಿವಾಲಯ ನೇಮಕಾತಿ ನಿಯಮಕ್ಕೆ ತಿದ್ದುಪಡಿ