ಅಗ್ನಿಪಥ್ ಯೋಜನೆಯನ್ನು ಯುವಜನತೆ ಸದುಪಯೋಗ ಪಡಿಸಿಕೊಳ್ಳಿ

ಪಿರಿಯಾಪಟ್ಟಣ: ಜು.27:- ಕೇಂದ್ರ ಸರಕಾರ ಅಗ್ನಿಪಥ್ ಯೋಜನೆಯ ಮೂಲಕ ದೇಶದಲ್ಲಿ ಹೆಚ್ಚಿನ ಮಂದಿ ಸೈನ್ಯದಲ್ಲಿ ಸೇವೆಸಲ್ಲಿಸಲು ಅವಕಾಶ ನೀಡಿದೆ ಇದನ್ನು ಯುವಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಾಜಿ ಸೈನಿಕ ವಿಕ್ರಮ್‍ರಾಜ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಮಿಡ್‍ಟೌನ್ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಗಿಲ್ ವಿಜಯ್‍ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೈನ್ಯದ ಮೂಲಕ ದೇಶ ಸೇವೆಯನ್ನು ಮಾಡುವ ಅವಕಾಶ ಪ್ರತಿಯೊಬ್ಬರಿಗೂ ದೊರಕುವುದಿಲ್ಲ ಆದ್ದರಿಂದ ಭಾರತ ಮಾತೆಯ ಸೇವೆಸಲ್ಲಿಸಲು ಇದು ಉತ್ತಮ ಅವಕಾಶವಾಗಿದ್ದು ಇಂದಿನ ಯುವಕರು ಈ ಬಗ್ಗೆ ಚಿಂತನೆ ನಡೆಸಬೇಕು. ದೇಶಕ್ಕಾಗಿ ಹುತಾತ್ಮರಾದ ಯೋಧರನ್ನು ನೆನೆಪಿಸಿಕೊಳ್ಳುವುದು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯಾಗಿದೆ. ಅದರಲ್ಲಿಯೂ ಕಾರ್ಗಿಲ್ ಯೋಧರು ದೇಶದ ಒಳನುಸಳಿದ ಶತ್ರುಗಳನ್ನು ತಮ್ಮ ಪ್ರಾಣವನ್ನು ಮುಡುಪಾಗಿಟ್ಟು ದೇಶಕ್ಕೆ ವಿಜಯತಂದುಕೊಟ್ಟವರು, ಕಾರ್ಗಿಲ್‍ನಂತ ದುರ್ಗಮ ಪ್ರದೇಶದಲ್ಲಿ ಶತ್ರುದೇಶದೊಡನೆ ಹೋರಾಟ ಮಾಡಿದ ಯೋಧರ ಬಲಿದಾನವನ್ನು ನಾವೆಲ್ಲರು ಸ್ಮರಣೆ ಮಾಡಬೇಕು ಎಂದು ತಿಳಿಸಿದರು.
ಹಿರಿಯ ವಕೀಲ ಮಾಜಿ ರೋಟರಿ ಗೌರ್ನರ್ ಬಿ.ವಿ.ಜವರೇಗೌಡ ಮಾತನಾಡಿ ಇಂದಿನ ಯುವಜನರು ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು. ದೇಶಕ್ಕೆ ದೇಶದ ಅಭಿವೃದ್ದಿಗೆ ನಮ್ಮದೇ ಕೊಡುಗೆ ನೀಡಲು ಪ್ರತಿಯೊಬ್ಬರು ಪ್ರಯತ್ನ ಪಡಬೇಕು ಆಗ ದೇಶ ಹೆಚ್ಚಿನ ಅಭಿವೃದ್ದಿ ಹೊಂದುತ್ತದೆ ಎಂದು ತಿಳಿಸಿದರು.
ರೋಟರಿ ಮಿಡ್‍ಟೌನ್ ಅಧ್ಯಕ್ಷ ಕೆ.ಎ.ಸತ್ಯನಾರಾಯಣ ಮಾತನಾಡಿ ರಾಷ್ಟ್ರದಲ್ಲಿ ಎರಡು ವಿಜಯದಿವಸಗಳನ್ನು ಆಚರಿಸುತ್ತಾರೆ. ಡಿ.16ರಂದು ಪಾಕಿಸ್ಥಾನದ ಮೇಲೆ ಯುದ್ದಗೆದ್ದ ಸಂದರ್ಭವನ್ನು ವಿಜಯದಿವಸವನ್ನಾಗಿ ಆಚರಿಸಲಾಗುತ್ತದೆ. ಅಲ್ಲದೆ ಜು.26ರನ್ನು ಕಾರ್ಗಿಲ್ ವಿಜಯ್‍ದಿವಸ್ ಆಗಿ ಆಚರಣೆ ಮಾಡಲಾಗುತ್ತಿದ್ದು. ದೇಶಕ್ಕಾಗಿ, ಜನರ ಹಿತಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರನ್ನು ಸ್ಮರಿಸಲು ಇದು ಸದಾವಾಕಾಶವಾಗಿದೆ. ಯುವಕರು ದೇಶದ ಹಿತಕ್ಕಾಗಿ ಯೋಧರಂತೆಯೇ ದೇಶದೊಳಗೆ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲ ಡಿ.ದೇವರಾಜ್ ಮಾತನಾಡಿ ದೇಶದಲ್ಲಿ ಎಲ್ಲಾ ವರ್ಗದವರು ಸೈನ್ಯಕ್ಕೆ ಸೇರಬೇಕು ದೇಶ ಸೇವೆಗೆ ಕೇವಲ ಶೂದ್ರ ಸಮುದಾಯಗಳಷ್ಟೆ ಮೀಸಲು, ಮತ್ತು ಬಡತನಕ್ಕಾಗಿ, ಉದ್ಯೋಗಕ್ಕಾಗಿ ಸೈನ್ಯಕ್ಕೆ ಸೇರಬೇಕು ಎಂಬ ಮನೋಭಾವ ದೂರವಾಗಿ ದೇಶದ ಪ್ರತಿಯೊಂದು ಮನೆಯಿಂದಲೂ ದೇಶಸೇವೆಗೆ ಯುವಕರು ಮುಂದಾಗಬೇಕು ಎಂದು ತಿಳಿಸಿದರು.
ಈ ಸಂದರ್ಭಲ್ಲಿ ನಿವೃತ್ತ ಸೈನಿಕ ವಿಕ್ರಮ್‍ರಾಜ್ ರನ್ನು ಸನ್ಮಾನಿಸಲಾಯಿತು. ಮಾಜಿ ಯೋಧರಾದ ಶಿವು, ಕೆ.ಆರ್.ಬಿದ್ದಪ್ಪ, ರೋಟರಿ ಕಾರ್ಯದರ್ಶಿ ವಿನಯಶೇಖರ್, ನಿಯೋಜಿತ ರೋಟರಿ ಅಧ್ಯಕ್ಷ ನಟರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.