ಅಗ್ನಿಪಥ್‌ಗೆ ವಿರೋಧ ದೆಹಲಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಕೇಂದ್ರದ ವಿರುದ್ಧ ಆಕ್ರೋಶ

ನವದೆಹಲಿ, ಜೂ. ೨೨- ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಹಾಗೂ ಕಾಂಗ್ರೆಸ್ ವರಿಷ್ಠರ ಇಡಿ ತನಿಖೆ ಖಂಡಿಸಿ ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿಂದು ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನ ನಡೆಸಿದ್ದು, ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರುಗಳು ಈ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿ ಕಾಂಗ್ರೆಸ್‌ನ ವಿರಾಟ್ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದರು.
ಕೇಂದ್ರ ಸರ್ಕಾರವು ಹೊಸದಾಗಿ ಸೇನಾ ನೇಮಕಾತಿಗಾಗಿ ಜಾರಿ ಮಾಡಿರುವ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಹಾಗೂ ಇಡಿ ತನಿಖಾ ಸಂಸ್ಥೆಯ ಮೂಲಕ ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಇಂದು ದೆಹಲಿಯ ಎಐಸಿಸಿ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿದರು.
ಎಐಸಿಸಿ ಕಚೇರಿ ಮುಂದೆ ನಡೆದ ಈ ಬೃಹತ್ ಪ್ರತಿಭಟನೆಯಲ್ಲಿ ಇಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಹಿರಿಯ ಮುಖಂಡರುಗಳಾದ ಆರ್.ವಿ. ದೇಶಪಾಂಡೆ, ಎಸ್.ಆರ್. ಪಾಟೀಲ್, ಎಂ.ಬಿ. ಪಾಟೀಲ್, ಡಾ. ಜಿ. ಪರಮೇಶ್ವರ್, ರಮೇಶ್‌ಕುಮಾರ್, ದಿನೇಶ್‌ಗುಂಡೂರಾವ್, ಎಚ್.ಕೆ. ಪಾಟೀಲ್, ಉಗ್ರಪ್ಪ, ಸಂಸದ ಡಿ.ಕೆ. ಸುರೇಶ್, ಪಕ್ಷದ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ ಖಂಡ್ರೆ ಸೇರಿದಂತೆ ರಾಜ್ಯದ ಬಹುತೇಕ ಕಾಂಗ್ರೆಸ್ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರುಗಳು ಈ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಕೇಂದ್ರದ ಅಗ್ನಿಪಥ್ ಯೋಜನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಮತ್ತು ಇಡಿ ತನಿಖೆಯನ್ನು ಖಂಡಿಸಿ ಇಂದು ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳಲು ನಿನ್ನೆಯೇ ರಾಜ್ಯ ಕಾಂಗ್ರೆಸ್‌ನ ಎಲ್ಲ ಪ್ರಮುಖ ನಾಯಕರುಗಳು ದೆಹಲಿಗೆ ತೆರಳಿದ್ದು, ಇಂದು ಬೆಳಿಗ್ಗೆ ಎಐಸಿಸಿ ಕಚೇರಿಯಲ್ಲಿ ಎಲ್ಲ ನಾಯಕರು ಒಗ್ಗೂಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಅಗ್ನಿಪಥ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು. ಹಳೆಯ ಮಿಲಿಟರ್ ನೇಮಕಾತಿ ನಿಯಮಗಳನ್ನೇ ಮುಂದುವರೆಸುವಂತೆ ಕಾಂಗ್ರೆಸ್ ನಾಯಕರು ಆಗ್ರಹಿಸಿದರು.


ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ದೇಶದ ಹಲವೆಡೆ ಪ್ರತಿಭಟನೆ ಹಿಂಸಾಚಾರಗಳು ನಡೆದಿದ್ದವು. ಕಾಂಗ್ರೆಸ್ ಪಕ್ಷ ಸಹ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು, ಇಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ತನ್ನ ಶಕ್ತಿ ಪ್ರದರ್ಶನವನ್ನು ನಡೆಸಿತು.
ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯನ್ನು ವಾಪಸ್ ಪಡೆಯದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿಯೂ ಕಾಂಗ್ರೆಸ್ ನಾಯಕರು ಗುಡುಗಿದರು.
ಇಂದು ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಹಾಗೂ ಕಾಂಗ್ರೆಸ್ ವರಿಷ್ಠರ ವಿರುದ್ಧ ಇಡಿ ತನಿಖೆಯನ್ನು ಖಂಡಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದೇವೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದರು.
ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿಯವರ ಜತೆ ನಾವಿದ್ದೇವೆ. ಕಿರುಕುಳ ನೀಡುವ ಉದ್ದೇಶದಿಂದ ಅವರನ್ನು ಇ.ಡಿ. ವಿಚಾರಣೆಗೊಳಪಡಿಸಲಾಗಿದೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ. ನಾವು ಹೆದರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಸೈನಿಕರಿಗೆ ಅಪಮಾನ ಮಾಡಲು ಅಗ್ನಿಪಥ್ ಯೋಜನೆಯನ್ನು ತರಲಾಗಿದೆ. ಇದಕ್ಕೆ ನಮ್ಮ ವಿರೋಧವಿದೆ. ಯಾವುದೇ ಕಾರಣಕ್ಕೂ ಅಗ್ನಿಪಥ್ ಯೋಜನೆಗೆ ಕಾಂಗ್ರೆಸ್ ಬಿಡುವುದಿಲ್ಲ ಎಂದು ಗುಡುಗಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿಯವರ ವಿರುದ್ಧ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ನಡೆಸಿದೆ. ಇವರ ಇ.ಡಿ. ವಿಚಾರಣೆಯನ್ನು ಖಂಡಿಸಿ ಸಹ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ಹೇಳಿದರು.
ಕಾರು ತಡೆದ ಪೊಲೀಸರು
ಪ್ರತಿಭಟನೆಗೂ ಮೊದಲು ಎಐಸಿಸಿ ಕಚೇರಿಗೆ ಆಗಮಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರನ್ನ ಪೊಲೀಸರು ತಡೆದರಾದರೂ ನಂತರ ಹಿರಿಯ ನಾಯಕರು ಸಿದ್ದರಾಮಯ್ಯನವರ ಸ್ಥಾನಮಾನದ ಬಗ್ಗೆ ಮನವರಿಕೆ ಮಾಡಿಕೊಟ್ಟ ನಂತರ ಅವರನ್ನು ಎಐಸಿಸಿ ಕಚೇರಿ ಒಳಗೆ ಬಿಡಲಾಯಿತು.
ಈ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ಸಿಂಗ್ ಸುರ್ಜೇವಾಲಾ, ಮುಕುಲ್ ವಾಸ್ಮಿಕ್, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರುಗಳು ಪಾಲ್ಗೊಂಡಿದ್ದರು.

ರಾಹುಲ್-ಪ್ರಿಯಾಂಕ ಭಾಗಿ
ಎಐಸಿಸಿ ಕಚೇರಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ರಾಹುಲ್‌ಗಾಂಧಿ ಮತ್ತು ಪ್ರಿಯಾಂಕಾಗಾಂಧಿ ಸಹ ಭಾಗಿಯಾಗಿದ್ದರು. ಸಭೆ ಆರಂಭವಾದ ಬಳಿಕ ತಡವಾಗಿ ಎಐಸಿಸಿ ಕಚೇರಿಗೆ ಬಂದ ರಾಹುಲ್‌ಗಾಂಧಿ ಮತ್ತು ಪ್ರಿಯಾಂಕಾಗಾಂಧಿ ಇಬ್ಬರೂ ಪ್ರತಿಭಟನಾ ಸಭೆಯ ವೇದಿಕೆಯಲ್ಲಿ ಇತರ ನಾಯಕರೊಂದಿಗೆ ಕುಳಿತು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡರು.