ಅಗಾಡಿ ಸರ್ಕಾರ ಶರದ್ ಪವಾರ್ ಕೈಯ್ಯಲ್ಲಿ

ಮುಂಬೈ, ಅ. ೩೦ – ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರ ಕಾಂತ್ ಪಾಟೀಲ್ ರಾಜ್ಯದ ಮಹಾ ವಿಕಾಸ್ ಅಗಾಡಿ ಮೈತ್ರಿ ಕೂಟ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರ ರಾಜ್ಯ ಸರ್ಕಾರವನ್ನು ಎನ್ ಸಿ ಪಿ ಪರಮೋಚ್ಛ ನಾಯಕ ಶರದ್ ಪವಾರ್ ನಡೆಸುತ್ತಿದ್ದಾರೆ ಎಂದು ಚಂದ್ರಕಾಂತ್ ಸುದ್ದಿಗೋಷ್ಟಿಯಲ್ಲಿ ದೂರಿದ್ದಾರೆ. ಮಹಾರಾಷ್ಟ್ರದಲ್ಲಿ ಯಾವುದೇ ಸಮಸ್ಯೆ ಬಗೆಹರಿಸಿಕೊಳ್ಳಬೇಕಾದರೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬದಲು, ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಬೇಕಿದೆ ಎಂದು ಹೇಳಿದ್ದಾರೆ. ವಿದ್ಯುತ್ ಶುಲ್ಕಗಳ ಹೆಚ್ಚಳದ ಬಗ್ಗೆ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಭೇಟಿ ಮಾಡಿದ್ದಾಗ, ಅವರು ಶರದ್ ಪವಾರ್ ಅವರನ್ನು ಭೇಟಿ ಮಾಡುವಂತೆ ನೀಡಿರುವ ಸಲಹೆ ಹಿನ್ನಲೆಯಲ್ಲಿ ಪಾಟೀಲ್ ಈ ಹೇಳಿಕೆ ನೀಡಿದ್ದಾರೆ.
ರಾಜ್ಯಪಾಲರು ಏನು ಹೇಳಿದ್ದಾರೋ ಎಂಬುದು ನನಗೆ ತಿಳಿದಿಲ್ಲ. ಆದರೆ ನೀವು ನನ್ನನ್ನು ಕೇಳಿದರೆ, ಶರದ್ ಪವಾರ್ ರಾಜ್ಯವನ್ನು ನಡೆಸುತ್ತಿದ್ದಾರೆ ಎಂದು ನಾನು ಹೇಳುತ್ತೇನೆ … ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಪಾಟೀಲ್ ತಿಳಿಸಿದ್ದಾರೆ. ಯಾವುದೇ ಸಮಸ್ಯೆ ಪರಿಹರಿಸಲು ಪವಾರ್ ಅವರನ್ನು ಭೇಟಿ ಮಾಡಬೇಕಾಗಿದೆ ಎಂದು ಪಾಟೀಲ್ ಗೇಲಿ ಮಾಡಿದ್ದಾರೆ. ಕಳೆದ ಒಂಬತ್ತು ತಿಂಗಳಲ್ಲಿ ಮುಖ್ಯಮಂತ್ರಿ ಕಚೇರಿಗೆ ತಾವು ಬರೆದ ಪತ್ರಗಳಿಗೆ ಒಂದಕ್ಕೂ ಉತ್ತರ ಬಂದಿಲ್ಲ ಎಂದು ಪಾಟೀಲ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.