
ಬೆಂಗಳೂರು, ಜು, ೧೬- ಉದಯ್ ಪುರದ ದಿವ್ಯಾಂಗರ ಪ್ರತಿಷ್ಠಿತ ರಾಷ್ಟ್ರಮಟ್ಟದ ಸ್ವಯಂ ಸೇವಾ ಸಂಸ್ಥೆ ನಾರಾಯಣ್ ಸೇವಾ ಸಂಸ್ಥಾನ್ ನಿಂದ ಬೆಂಗಳೂರಿನಲ್ಲಿ ಐದು ರಾಜ್ಯಗಳಿಂದ ಆಗಮಿಸಿದ್ದ ದಿವ್ಯಾಂಗರಿಗೆ ಹೊಂದಿಕೆಯಾಗುವಂತೆ ಅಂಗಾಂಗ ಜೋಡಣೆಗಾಗಿ ಅಂಗಾಂಗ ಮಾಪನ ಶಿಬಿರಕ್ಕೆ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಚಾಲನೆ ನೀಡಿದರು.
ಬೆಂಗಳೂರಿನ ವಿವಿಪುರದಲ್ಲಿನ ಅರಸೋಜಿ ರಾವ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಬೆಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ದಿವ್ಯಾಂಗರಿಗೆ ಸೂಕ್ತವಾಗುವಂತೆ ಅನುಭವಿ ಮೂಳೆ ತಜ್ಞರು, ಪ್ರಾಸ್ತೆಟಿಕ್ ಪರಿಣಿತ ವೈದ್ಯರು ಅಳತೆ ತೆಗೆದುಕೊಂಡರು. ದಿವ್ಯಾಂಗರ ಬದುಕಿನಲ್ಲಿ ಇದು ಹೊಸ ಆಶಾಕಿರಣ ಮೂಡಿಸಿದ್ದು, ಸ್ವಾವಲಂಬಿ ಬದುಕು ಸಾಗಿಸಲು ಸಾಧ್ಯವಾಗಲಿದೆ.
ಸಮಾರಂಭದಲ್ಲಿ ಮಾತನಾಡಿದ ಸಚಿವ ಬಿ. ನಾಗೇಂದ್ರ, ಜೀವನದಲ್ಲಿ ನಿರೀಕ್ಷೆ ಇಲ್ಲದೇ ಸಂಭವಿಸುವ ಅವಘಡದಲ್ಲಿ ಕೈ, ಕಾಲು, ಅಮೂಲ್ಯ ಅಂಗಾಂಗಳನ್ನು ಕಳೆದುಕೊಂಡು ಕಷ್ಟದಲ್ಲಿರುವವರಿಗೆ ಸರ್ಕಾರದ ಅರೋಗ್ಯ ಯೋಜನೆಗಳು ಸಹಕಾರಿಯಾಗಿವೆ. ಇದರ ಜೊತೆಗೆ ಇಂತಹ ಸೇವಾ ಸಂಸ್ಥೆಗಳ ಸಮಾಜ ಮುಖಿ ಸೇವೆಯಿಂದ ಆರ್ಥಿಕ ಹೊರೆ ಕಡಿಮೆಯಾಗಿದೆ ಎಂದರು
ಈ ಶಿಬಿರದಲ್ಲಿ ಒಂದು ಸಾವಿರ ಮಂದಿಗೆ ಉಚಿತ ಅಂಗಾಂಗ ಜೋಡಣೆ ಮಾಡುವ ಗುರಿ ಹೊಂದಿದ್ದು, ಇದು ನಾರಾಯಣ್ ಸೇವಾ ಸಂಸ್ಥಾನ್ ನ ೯೮೮ ನೇ ಶಿಬಿರವಾಗಿದೆ.
ಕಾರ್ಯಕ್ರಮದಲ್ಲಿ ನಾರಾಯಣ್ ಸೇವಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಭಗವಾನ್ ಪ್ರಸಾದ್ ಗೌರ್, ನಾರಾಯಣ್ ಸೇವಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಭಗವಾನ್ ಪ್ರಸಾದ್ ಗೌರ್, ಶಿಬಿರದ ಸಮನ್ವಯಕಾರ ರೋಹಿತ್ ತಿವಾರಿ, ಮಾಧ್ಯಮ ಸಮನ್ವಯಕಾರರಾದ ಬಿ.ವಿ ಚಂದ್ರಶೇಖರಯ್ಯ ಉಪಸ್ಥಿತರಿದ್ದರು.