ಅಗಸನೂರು ಸರ್ಕಾರಿ ಶಾಲೆಯಲ್ಲಿ ‘ಶಾಲಾ ಸಂಸತ್ತು’


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.09: ಪ್ರಜೆಗಳೇ ಪ್ರಭುಗಳಾಗುವ ‘ಪ್ರಜಾಪ್ರಭುತ್ವ’ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವ ದಿಸೆಯಲ್ಲಿ ಪ್ರತಿ ವರ್ಷ ಕಾರ್ಯಕ್ರಮ ಹಮ್ಮಿಕೊಂಡು ತಾಲ್ಲೂಕಿನ ಅಗಸನೂರು ಸರ್ಕಾರಿ ಉನ್ನತಿಕರಿಸಿದ ಪ್ರೌಢ  ಶಾಲೆ ಗಮನ ಸೆಳೆಯುತ್ತು.
 ಶಾಲಾ ಸಂಸತ್ತು ಕಾಟಾಚಾರಕ್ಕೆ ರಚನೆಯಾಗುವುದಿಲ್ಲ. ಅಕ್ಷರಶಃ ಪ್ರಜಾಪ್ರಭುತ್ವ ಮಾದರಿಯಲ್ಲಿಯೇ ನಡೆಯುತ್ತದೆ. ಮಕ್ಕಳಲ್ಲಿ ಸಂಸದೀಯ ವ್ಯವಸ್ಥೆಯ ಬಗೆಗೆ ಈಗಿನಿಂದಲೇ ತಿಳಿವಳಿಕೆ ನೀಡುವ ಭಾಗವಾಗಿ ಕಳೆದ ನಾಲ್ಕು ವರ್ಷಗಳಿಂದ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗಿದೆ.
ಚುನಾವಣೆ ಅಧಿಸೂಚನೆ ಹೊರಡಿ ಸುವುದರೊಂದಿಗೆ ಶಾಲಾ ಸಂಸತ್ತಿನ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತವೆ. ನಾಮಪತ್ರ ಸಲ್ಲಿಕೆ, ನಾಮಪತ್ರ ವಾಪಸ್ ಪಡೆಯುವುದು, ನಾಮಪತ್ರ ಪರಿಶೀಲನೆ, ಪ್ರಚಾರ, ಚುನಾವಣೆ ದಿನಾಂಕ, ಮತ ಎಣಿಕೆ, ಫಲಿತಾಂಶ ಘೋಷಣೆ, ಪ್ರಮಾಣ ವಿತರಣೆ, ಪ್ರಮಾಣ ವಚನ ಸ್ವೀಕಾರ ಹೀಗೆ ಎಲ್ಲವೂ ಸಂಸತ್ತಿನ ಮಾದರಿಯಲ್ಲಿಯೇ ನಡೆಯುತ್ತವೆ.
ಪ್ರಧಾನಿ, ಗ್ರಂಥಾಲಯ ಸಚಿವ, ಕ್ರೀಡಾ ಸಚಿವ, ಸಾಂಸ್ಕೃತಿಕ ಹಾಗೂ ಪ್ರವಾಸ ಸಚಿವ, ಆಹಾರ ಸಚಿವ, ಸ್ವಚ್ಛತಾ ಸಚಿವ, ಆರೋಗ್ಯ ಸಚಿವ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ, ಬಾಲಕರ ವಸತಿ ನಿಲಯ ಸಚಿವ ಹಾಗೂ ಬಾಲಕಿಯರ ವಸತಿ ನಿಲಯ ಸಚಿವ ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಪ್ರಧಾನಮಂತ್ರಿ ಸ್ಥಾನಕ್ಕೆ ರೂ.25 ಹಾಗೂ ಸಚಿವ ಸ್ಥಾನಗಳಿಗೆ ರೂ. 20 ಠೇವಣಿ ಇಡಬೇಕು. ಮತದಾರರಿಗೆ ಆಸೆ- ಆವಿಷಗಳನ್ನು ಒಡ್ಡಬಾರದು. ಬೆದರಿಕೆ ಹಾಕಬಾರದು. ಪರಸ್ಪರ ಟೀಕೆ ಮಾಡಿಕೊಳ್ಳಬಾರದು. ಸ್ಪರ್ಧೆ ಚುನಾವಣೆಗಷ್ಟೇ ಸಿಮಿತವಾಗಬೇಕು ಎಂಬ ನಿಯಮ ಕೂಡ ರೂಪಿಸಿರುವುದು ಇಲ್ಲಿನ ವಿಶೇಷ.
ಈ ಬಾರಿಯ ಶಾಲಾ ಸಂಸತ್ತು ಚುನಾವಣೆಯಲ್ಲಿ 13 ಸ್ಥಾನಗಳಿಗೆ ಒಟ್ಟು 25 ಜನ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಆ ಸ್ಥಾನಗಳ ಆಯ್ಕೆಗೆ ಚುನಾವಣೆ ನಡೆಯಿತು. ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಯಿತು. 12 ವಿದ್ಯಾರ್ಥಿಗಳು ಪರಜಿತರಾದರು.
ಪ್ರಧಾನಮಂತ್ರಿಯಾಗಿ ನವಿತಾ, ಸಂಸ್ಕೃತಿ ಮತ್ತು ಪ್ರವಾಸ ಸಚಿವರಾಗಿ ಎಸ್.ಹುಸೇನಪ್ಪ, ಗ್ರಂಥಾಲಯ ಸಚಿವರಾಗಿ ಲಕ್ಷ್ಮಿ, ಕ್ರೀಡಾ ಸಚಿವರಾಗಿ ತಾಯಮ್ಮ, ಸ್ವಚ್ಛತಾ ಸಚಿವರಾಗಿ ಅಶೋಕ, ಆರೋಗ್ಯ ಸಚಿವರಾಗಿ ರಕ್ಷಿತಾ, ಶಿಕ್ಷಣ ಸಚಿವರಾಗಿ ಎಸ್.ಪಕ್ಕೀರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ ಟಿ.ಸಿಂಧು, ಗ್ರಂಥಾಲಯ ಸಚಿವರಾಗಿ ಲಕ್ಷ್ಮೀ, ವಿಜ್ಞಾನ ಮತ್ತು ಪ್ರಯೋಗಾಲಯ ಸಚಿವರಾಗಿ ಅಭಿಷೇಕ, ಗೃಹ ಸಚಿವರಾಗಿ ವೆಂಕಟೇಶ, ಪರಿಸರ ಸಚಿವರಾಗಿ ಅರ್ಜುನರಾಜು, ಆಹಾರ ಸಚಿವರಾಗಿ ಮಕ್ವಲ್ ಆಯ್ಕೆಯಾದರು. ನಂತರ ಅವರಿಗೆ ಪ್ರಮಾಣ ಪತ್ರಗಳನ್ನೂ ನೀಡಲಾಯಿತು.
ಶಾಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಗುರು ಪ್ರತಿಜ್ಞೆ ಬೋಧಿಸಿ ನೂತನ ಪ್ರತಿನಿಧಿಗಳ ಸಂಭ್ರಮವನ್ನು ಹೆಚ್ಚಿಸಿದರು.
ಶಾಲಾ ಸಂಸತ್ತು ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಗೆಗೆ ಅರಿವು ಮೂಡಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಸಚಿವ ಸಂಪುಟದ ರಚನೆ ಜತೆಗೆ ಸದನಕ್ಕೆ ಸದಸ್ಯರ ನಾಮ ನಿರ್ದೇಶನವನ್ನೂ ಮಾಡಲಾಗುತ್ತದೆ. ಪ್ರತಿ ತಿಂಗಳು ಶಾಲೆಯ ಗ್ರಂಥಾಲಯ ಕೋಣೆಯಲ್ಲಿ ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಅಧಿವೇಶನ ನಡೆಯುತ್ತದೆ. ಅಧಿವೇಶನದಲ್ಲಿ ಶಾಲಾ ಸಮಸ್ಯೆಗಳ ಬಗೆಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುತ್ತಾರೆ. ಆಯಾ ಇಲಾಖೆ ಸಚಿವರು ಪ್ರಗತಿ ಪರಿಶೀಲಿಸುತ್ತಾರೆ. ಆಗಬೇಕಾದ ಅಭಿವೃದ್ಧಿ ಕೆಲಸಗಳ ಕುರಿತು ಚರ್ಚೆ ನಡೆಸುತ್ತಾರೆ’.
ಶಾಲೆಯ ಸಣ್ಣಪುಟ್ಟ ಜವಾಬ್ದಾರಿಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸುತ್ತಾರೆ. ಪ್ರಾರ್ಥನಾ ಸಭೆ ನಿರ್ವಹಣೆ, ಸ್ವಚ್ಛತೆ, ಶಿಸ್ತು ಕಾಪಾಡುವಿಕೆ, ಪರಿಸರ ಸಂರಕ್ಷಣೆ ಮಾಡುತ್ತಾರೆ. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ದತ್ತು ತೆಗೆದುಕೊಂಡು ಬೆಳೆಸಿದ ಸಸಿಗಳು ನಳನಳಿಸುತ್ತಿವೆ. ಶಾಲಾ ಕೈತೋಟವನ್ನೂ ವಿದ್ಯಾರ್ಥಿಗಳೇ ನಿರ್ವಹಣೆ ಮಾಡುತ್ತಿದ್ದಾರೆ’ ಎಂದು ಹೇಳುತ್ತಾರೆ. –ಮುಖ್ಯ ಗುರು ಹುಲೇಶ ಹಾಗೂ ಸಹ ಶಿಕ್ಷಕ ವೃಂದವರು.