ಅಗಲಿದ ಸಾಹಿತಿಗಳಿಗೆ ಕಸಾಪ ವತಿಯಿಂದ ನುಡಿನಮನ

ಲಿಂಗಸುಗೂರು,ಜ.೧೨- ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಧ್ವನಿಯಾಗಿ, ಧರ್ಮದ ನಿಯಮಗಳನ್ನು ಕಥೆಗಳ ಮೂಲಕ ನಿರೂಪಿಸುವುದರ ಮೂಲಕ ಶೋಷಿತ ಮಹಿಳೆಯರ ಪರವಾದ ಗಟ್ಟಿ ನಿಲುವು ತಾಳಿದವರು ಸಾ.ರಾ ಅಬೂಬಕ್ಕರ್ ಎಂದು ಪ್ರೋ.ಜಿ.ವಿ ಕೆಂಚನಗುಡ್ಡ ಅಭಿಮತ ವ್ಯಕ್ತಪಡಿಸಿದರು.
ಲಿಂಗಸೂಗೂರಿನ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಾ.ರಾ ಅಬೂಬಕ್ಕರರವರು ೪೦ ನೇ ವಯಸ್ಸಿಗೆ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದರೂ, ಅವರ ಚಂದ್ರಗಿರಿ ತೀರದಲ್ಲಿ ಕೃತಿ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತು. ಮುಂದೆ ತಳ ಒಡೆದ ದೋಣಿಯಲಿ, ಸುಳಿಯಲ್ಲಿ ಸಿಕ್ಕವರು, ತೇಲಾಡುವ ಮೋಡಗಳು, ಅರ್ಧ ರಾತ್ರಿಯಲ್ಲಿ ಹುಟ್ಟಿದ ಕೂಸು, ಮಗಳು ಹುಟ್ಟಿದಳು ಹೀಗೆ ಹತ್ತು ಹಲವಾರು ಕೃತಿಗಳ ಮೂಲಕ ಸ್ತ್ರೀ ಸಂವೇದನೆಯನ್ನು ತೋರಿಸಿಕೊಟ್ಟವರಾಗಿದ್ದಾರೆಂದು ಹೇಳಿದರು. ಇದೇ ಸಂದರ್ಭದಲ್ಲಿ ನಮ್ಮ ಜಿಲ್ಲೆಯ ದೇವದುರ್ಗದ ಹಿರಿಯ ಸಾಹಿತಿ, ಸಂಶೋಧಕ, ನಿವೃತ್ತ ಭೂಗರ್ಭ ತಜ್ಞ ಡಾ.ಹೆಚ್ ಚಂದ್ರಶೇಖರರವರಿಗೂ ನುಡಿನಮನ ಸಲ್ಲಿಸಲಾಯಿತು.
ಬಸವರಾಜ ಖೈರವಾಡಗಿ ಮಾತನಾಡಿ,ಗಡಿಭಾಗದಲ್ಲಿ ಜನಿಸಿದರೂ, ಗಡಿಭಾಗದ ಸಮಸ್ಯೆಯನ್ನು ಕಾವ್ಯದ ಮೂಲಕ ಕಟ್ಟಿಕೊಟ್ಟವರು ಸಾ.ರಾ ಅಬೂಬಕ್ಕರ್ ಎಂದು ಹೇಳಿದರು. ನಂತರ ಮಾತನಾಡಿದ ಹಿರಿಯ ಸಾಹಿತಿ ಡಾ.ಕೆ ಶಶಿಕಾಂತರವರು ಸಾ.ರಾ ಅಬೂಬಕ್ಕರರವರು ಧರ್ಮದ ನಿಯಮಗಳನ್ನೆ ಕಥೆಯ ಮೂಲಕ ಹೆಣೆದು ಹೆಂಗಳೆಯರ ಕಂಬನಿ ಒರೆಸಿದವರು ಸಾ.ರಾ ಅಬೂಬಕ್ಕರ ಎಂದು ಅವರ ಕಾರ್ಯವನ್ನು ಶ್ಲಾಘಿಸಿ,ನೇರ ನಿಷ್ಠೂರಿ ಡಾ.ಹೆಚ್ ಚಂದ್ರಶೇಖರರವರ ಜೊತೆಗಿನ ಒಡನಾಡಿತನವನ್ನು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಮಂಜುನಾಥ ಕಾಮಿನ್, ತಾಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರ, ಡಾ.ಪಿ ಜಗದೀಶ ಪದಾಧಿಕಾರಿಗಳಾದ ಯಮನೂರ ನದಾಫ, ಹುಸೇನಪ್ಪ ಮುಂಡರಗಿ, ಅಮರೇಗೌಡ ಅಗಸಿಮುಂದಿನ, ಸುಜಿತಾನಂದ, ಶಂಕರಗೌಡ,ಭೀಮಸಿಂಗ್ ನಾಯ್ಕ, ರುದ್ರಮುನಿ, ಮಂಜುನಾಥ ಪಾಟೀಲ ಮುಂತಾದವರು ಭಾಗವಹಿಸಿದ್ದರು.