ಅಗಲಿದ “ಪುನೀತ” ರಾಜಕುಮಾರನಿಗೆ ಬಿಜೆಪಿಯಿಂದ ಭಾವಪೂರ್ಣ ಶ್ರದ್ಧಾಂಜಲಿ

(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.31: ನಗರದ ಬಿಜೆಪಿ ಕಚೇರಿಯಲ್ಲಿ ಸ್ಯಾಂಡಲ್‍ವುಡ್‍ನ ಪವರ್‍ಸ್ಟಾರ್, ಕನ್ನಡ ಜನತೆಯ ಪ್ರೀತಿಯ ‘ಅಪ್ಪು’ ಯುವರತ್ನ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಭಾರತೀಯ ಜನತಾ ಪಕ್ಷದ ನಗರ ಘಟಕದಿಂದ ನಿನ್ನೆ ಸಂಜೆ ಪ್ರೀತಿಯ ನಾಯಕನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮೂಲಕ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ.ರಾ.ಕೊ. ಹಾಲು ಒಕ್ಕೂಟದ ನಿರ್ದೇಶಕ ಜಿ.ವೀರಶೇಖರರೆಡ್ಡಿ ಅವರು, ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆಯಿಂದ ಇಡೀ ಸ್ಯಾಂಡಲ್‍ವುಡ್ ಅಪಾರ ನಷ್ಟ ಉಂಟಾಗಿದೆ. ಅವರ ಅಗಲಿಕೆ ನುಂಗಲಾರದ ತುಪ್ಪದಂತಾಗಿದೆ. ಪುನೀತ್ ರಾಜ್‍ಕುಮಾರ್ ಅವರು ಹಲವಾರು ಸೇವಾ ಕಾಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಅಲ್ಲದೇ ಹಲವಾರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನೂ ಸಹ ಅವರು ಕೈಗೆತ್ತಿಕೊಂಡಿದ್ದರು. ಅದೆಷ್ಟೋ ಹಿರಿಯ ನಾಗರಿಕರಿಗೆ ನೆರವಾಗುವಂತೆ ವೃದ್ಧಾಶ್ರಮಗಳನ್ನು, ಗೋಶಾಲೆಗಳನ್ನು ಪ್ರಾರಂಭಿಸಿ ಧ್ರುವತಾರೆಯಾಗಿ ಮಿಂಚಿದ್ದರು. ಅಂತಹ ಮಹಾನ್ ವ್ಯಕ್ತಿಯ ಅಗಲಿಕೆಯು ಇನ್ನೂ ನಂಬಲಸಾಧ್ಯವಾಗುತ್ತಿದೆಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಬಿ.ವೆಂಕಟೇಶ್ವರ್ ಅವರು, ರಾಜ್ಯೋತ್ಸವ, ದೀಪಾವಳಿ ಆಚರಣೆಯ ಸಂಭ್ರಮದಲ್ಲಿದ್ದ ಕನ್ನಡಿಗರಿಗೆ ಅಪ್ಪು ಅವರ ಹಠಾತ್ಮರಣದಿಂದ ಬರಡಿಸಿಲು ಬಡಿದಂತಾಗಿದ್ದು, ನೈಜ ಅಭಿನಯ, ಸರಳ ಸಜ್ಜನಿಕೆ, ನಡವಳಿಕೆಯಿಂದ ಕನ್ನಡ ಬೆಳ್ಳಿತೆರೆಯಲ್ಲಿ ಧ್ರುವತಾರೆಯಾಗಿ ಮಿಂಚಿ ಮರೆಯಾದ “ಅಪ್ಪು”ವಿನ ನೆನಪು ಇನ್ನೂ ಅವಿಸ್ಮರಣೀಯ ಎಂದರು. ಈ ಸಂದರ್ಭದಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಕೆ. ರಾಮಾಂಜಿನಿ, ಉಪಾಧ್ಯಕ್ಷ ಕೇದಾರಸ್ವಾಮಿ, ಮಾಧ್ಯಮ ಸಂಚಾಲಕ ರಾಜೀವ್, ಕಾರ್ಯದರ್ಶಿ ಪ್ರಹ್ಲಾದ್ ದೇಸಾಯಿ, ಎಸ್.ಟಿ. ಮೋರ್ಚಾ ಅಧ್ಯಕ್ಷ ವೀರೇಶ್, ಕಛೇರಿ ಸಹಾಯಕ ಅಮರ್ ಮಿಸ್ ಯು ಅಪ್ಪು, ಯುವಮೋರ್ಚಾ ಬಾಲಚಂದ್ರ ಹಾಗೂ ಷಣ್ಮುಖ, ಸ್ವಾಮಿ ಉಪಸ್ಥಿತರಿದ್ದರು.